Karwar|Firebrand|Ananthkumar ಕಾರವಾರ: ಫೈರ್ ಬ್ರ್ಯಾಂಡ್ ಮಾಜಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ವದಂತಿಯಷ್ಟೇ ಅಲ್ಲ, ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬಿಜೆಪಿಯ ನಾಯಕತ್ವದ ಶೂನ್ಯತೆಯ ಪ್ರತಿಬಿಂಬವೂ ಹೌದು ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಬಿಜೆಪಿ ದಿಕ್ಕು ದೆಸೆಯಿಲ್ಲದ ರಾಜಕಾರಣದಲ್ಲಿ ತೊಡಗಿದೆ ಎಂಬ ಆರೋಪ ಬಿಜೆಪಿಯೊಳಗಿನಿಂದಲೇ ಕೇಳಿ ಬರುತ್ತಿದೆ. ಹೋರಾಟದ ರಾಜಕೀಯ ಕುಗ್ಗಿ, ಸಂಧಾನದ ರಾಜಕಾರಣ ಮೇಲುಗೈ ಸಾಧಿಸಿದೆ ಎಂಬ ಅಸಮಾಧಾನ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಗಟ್ಟಿಯಾಗಿದೆ. ರಾಜ್ಯದಲ್ಲಿ ಬಿಜೆಪಿಯ ಈಗೀನ ನಾಯಕತ್ವ ಮತ್ತು ಪರಿಸ್ಥಿತಿಯನ್ನು ವಿಮರ್ಶಿಸಿದರೆ ಇನ್ನೂ ಕನಿಷ್ಠ ಎರಡು ಮೂರು ಅವಧಿಗೆ ಬಿಜೆಪಿ ಅಧಿಕಾರದ ಹತ್ತಿರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂಬ ಭಾವನೆ ಬಹುತೇಕ ಕಾರ್ಯಕರ್ತರಲ್ಲಿದೆ.
ಇಂದಿನ ರಾಜ್ಯ ಬಿಜೆಪಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ನಾಯಕತ್ವದ ಕೊರತೆಯಲ್ಲ. ಅದು ಹೋರಾಟದ ಧ್ವನಿಯ ಕೊರತೆ. ಒಮ್ಮೆ ಹಿಂದುತ್ವದ ರಾಜಕೀಯಕ್ಕೆ ಸ್ಪಷ್ಟ ದಿಕ್ಕು ನೀಡಿದ್ದ ಪಕ್ಷ, ಇಂದು ಮೃದು ಮತ್ತು ಸಂಧಾನದ ರಾಜಕಾರಣದಲ್ಲಿ ಸಿಲುಕಿರುವುದು ಸಂಘ ಪರಿವಾರದ ಅಸಮಾಧಾನಕ್ಕೆ ಕಾರಣವಾಗಿದೆ.
ಇಂಥ ಪರಿಸ್ಥಿತಿಯಲ್ಲಿ ಹಿಂದು ಪರ ಗಟ್ಟಿ ಧ್ವನಿಯ, ತನ್ನ ನೀಲಿ ಕಣ್ಣಿನ ಹುಡುಗ (Blue eyed Boy) ಅನಂತಕುಮಾರ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರುವ ಪ್ರಯತ್ನ ಸಂಘಪರಿವಾರ ನಡೆಸುತ್ತಿದೆ. ತನ್ನ ಶಿಷ್ಯನನ್ನು ಬಿಜೆಪಿ ನಡೆಸಿಕೊಂಡಿರುವ ಬಗ್ಗೆ ಇನ್ನೂ ತೀವ್ರ ಅಸಮಾಧಾನ ಹೊಂದಿರುವ ಸಂಘ ಪರಿವಾರ, ಬೊಮ್ಮಾಯಿಯಂಥ ಸೆಕ್ಯುಲರ್ ಚಿಂತನೆಯ ವ್ಯಕ್ತಿಗೆ ರಾಜ್ಯದ ಸಿಎಂ ಹುದ್ದೆ ನೀಡಿ, ಪಕ್ಷ ಪ್ರಪಾತಕ್ಕೆ ಇಳಿದ ಬಗ್ಗೆ ನೋವು ಸಹ ಇದೆ.
ಸದ್ಯದ ರಾಜ್ಯದ ಪರಿಸ್ಥಿತಿಯ ಬಗ್ಗೆ ಕೇಂದ್ರ ನಾಯಕತ್ವವೂ ಸಹ ಗೊಂದಲದಲ್ಲಿದೆ, ಮೌನವಾಗಿದೆ. ಯಡಿಯೂರಪ್ಪ ನವರನ್ನು ಸಿಎಂ ಖುರ್ಚಿಯಿಂದ ಇಳಿಸಿ ‘ಯಡ್ಡಿ ಕ್ರಾಂತಿ’ ಮಾಡಿದೆ ಎಂದು ಬೀಗಿದ್ದ ಸಂತೋಷ್ ಜೀ, ಚುನಾವಣೆಯಲ್ಲಿ ಪಕ್ಷ ಮಕಾಡೆ ಮಲಗಿದ ನಂತರ ರಾಜ್ಯ ರಾಜಕಾರಣ ಸಾಕು ಎಂದು ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಆಗಿದ್ದಾರೆ. ಇನ್ನೂ ‘ಯಡ್ಡಿ ಕ್ರಾಂತಿ’ ಯ ಮತ್ತೋರ್ವ ಮಾಸ್ಟರ್ ಮೈಂಡ್ ಪ್ರಹ್ಲಾದ್ ಜೋಶಿಯವರ ಸಾಮರ್ಥ್ಯ ಸಹ ಈಗಾಗಲೇ ಅನಾವರಣ ಆಗಿದೆ. ವಿರೋಧ ಪಕ್ಷದ ನಾಯಕ ಅಶೋಕ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತರಾಗಿದ್ದಾರೆ. ಒಟ್ಟಾರೇ ರಾಜ್ಯ ಬಿಜೆಪಿ ಮನೆಯೊಂದು ನೂರು ಬಾಗಿಲಂಥಾಗಿದೆ.
ಹುಬ್ಬಳ್ಳಿ ಈದ್ಗಾ ಮೈದಾನ, ಭಟ್ಕಳ ಗಲಭೆ ಸೇರಿದಂತೆ ಹಲವು ಹಿಂದು ಪರ ಹೋರಾಟಗಳ ಮೂಲಕ ಕರಾವಳಿ ಹಾಗೂ ಉತ್ತರಕರ್ನಾಟಕ ಭಾಗಗಳಲ್ಲಿ ಬಿಜೆಪಿಗೆ ಒಂದು ಗಟ್ಟಿ ನೆಲೆ ಅನಂತಕುಮಾರ ಹೆಗಡೆ ದೊರಕಿಸಿದ್ದರು ಎಂಬ ಮಾತನ್ನು ಅವರ ವಿರೋಧಿಗಳು ಸಹ ಅಲ್ಲಗಳೆಯುವುದಿಲ್ಲ. ಇಂಥ ಸ್ಥಿತಿಯಲ್ಲಿ ಗಟ್ಟಿ ಹಿಂದುತ್ವದ ಧ್ವನಿ, ಮೊನಚಾದ ಮಾತುಗಾರಿಕೆಯ ಮೂಲಕ ಕೇವಲ ಉತ್ತರಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದ ಕರಾವಳಿ ಹಾಗೂ ಉತ್ತರಕರ್ನಾಟಕ ಸೇರಿದಂತೆ ರಾಜ್ಯ ಹಲವೆಡೆ ಅನಂತಕುಮಾರ ಅಸಖ್ಯಾಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಂಘದ ಕಟ್ಟಾಳು ಆಗಿರುವ ತನ್ನ ಶಿಷ್ಯನನ್ನು ಸಕ್ರಿಯ ರಾಜಕಾರಣಕ್ಕೆ ಮರಳಿ ಕರೆತಂದು ಆ ಮೂಲಕ ರಾಜ್ಯದಲ್ಲಿ ಹಿಂದುತ್ವದ ಧ್ವನಿ ಗಟ್ಟಿಗೊಳಿಸುವ ಮೂಲಕ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಸುವ ಪ್ರಯತ್ನ ಸಂಘಪರಿವಾರದ್ದು. ಆರ್.ಎಸ್.ಎಸ್ ನ (RSS) ಪ್ರಧಾನ ಕಾರ್ಯದರ್ಶಿ ರಾಜ್ಯದವರೇ ಆದ ದತ್ತಾತ್ರೇಯ ಹೊಸಬಾಳೆ ಸಹ ಈ ಪ್ರಯತ್ನದ ಭಾಗವಾಗಿ ವೇದಿಕೆ ಸಿದ್ದಗೊಳಿಸುತ್ತಿದ್ದಾರೆ ಎನ್ನಲಾಗಿದೆ.
ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ್ ಸೇರಿದಂತೆ ಹಿಂದುತ್ವದ ಪರ ಗಟ್ಟಿ ಧ್ವನಿಯವರನ್ನು ಮುಂದಿನ ವಿಧಾನಸಭೆಯಲ್ಲಿ ಕಣಕ್ಕೀಳಿಸುವುದು. ಅಲ್ಲದೇ ಪಕ್ಷ ಬಿಟ್ಟ ಯತ್ನಾಳ, ಈಶ್ವರಪ್ಪ ಮುಂತಾದವರನ್ನು ಮರಳಿ ಪಕ್ಷಕ್ಕೆ ಕರೆತರುವ ಚಿಂತನೆ ಕೂಡಾ ನಡೆಯುತ್ತಿದೆ.
ಅನಂತಕುಮಾರ ಹೆಗಡೆ ತಟಸ್ಥರಾಗಿದ್ದರಿಂದ ಕಳೆದ ವಿಧಾನಸಭೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಕಳೆದುಕೊಳ್ಳುವಂತಾಗಿತ್ತು. ಮುತ್ಸದ್ಧಿ ರಾಜಕಾರಣಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮುಂದಿಟ್ಟುಕೊಂಡು ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಪಕ್ಷದ ಪ್ರತಿ ಕಾರ್ಯಕರ್ತನಿಗೂ ಗೊತ್ತು. ಈಗಾಗಲೇ ಶಾಸಕರಾಗಿ, ಸಚಿವರಾಗಿ, ಸ್ಪೀಕರ್ ಹಾಗೂ ಸಂಸದರಾಗಿ ರಾಜಕಾರಣದ ಎಲ್ಲಾ ಹುದ್ದೆಗಳನ್ನು ಸವಿದಿರುವ ಕಾಗೇರಿಯವರನ್ನು ಈ ಅವಧಿ ನಂತರ ಮತ್ತೇ ಚುನಾವಣಾ ಕಣಕ್ಕೀಳಿಸದೇ ಅವರನ್ನು ‘ಮಾರ್ಗದರ್ಶಕ ಮಂಡಲ’ದಲ್ಲಿ ಕುಳ್ಳಿಸುವ ಪ್ರಯತ್ನ ಸಹ ನಿಧಾನವಾಗಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಜಿಲ್ಲೆಯ ಕರಾವಳಿಯ ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ತನ್ನ ಶಿಷ್ಯ ಅನಂತಕುಮಾರ್ ಹೆಗಡೆಯನ್ನು ಕಣಕ್ಕೀಳಿಸಿ, ಆ ಮೂಲಕ ಕರಾವಳಿ ಹಾಗೂ ಉತ್ತರಕರ್ನಾಟಕದಲ್ಲಿ ಕೇಸರಿ ಪತಾಕೆಯನ್ನು ಹಾರಿಸುವುದು ಸಂಘಪರಿವಾರದ ಚಿಂತನೆಯಾಗಿದೆ.
