ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಜಟಾಪಟಿ ಜೋರಾಗಿರುವ ಹೊತ್ತಿಗೆ ಡಿಸಿಎಮ್ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಭೇಟಿಯಾಗಿದ್ದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸೋನಿಯಾ ಗಾಂಧಿ ಭೇಟಿಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಆಸ್ಸಾಂ ಚುನಾವಣೆಯ ನಿಮಿತ್ತ ನವದೆಹಲಿಗೆ ಆಗಮಿಸಿದ್ದು ಆಸ್ಸಾಂ ಚುನಾವಣೆ ಗೆಲುವಿನ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಆಸ್ಸಾಂ ನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಇನ್ನೂ ರಾಜ್ಯದ ಅಧಿಕಾರ ಹಸ್ತಾಂತರದ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಮ್ ಡಿ.ಕೆ. ಶಿವಕುಮಾರ್ ಅವರು “ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲಾ ವಿಚಾರ ಮಾತನಾಡದೇ ಸುಮ್ನೇ ಹೋಗ್ತಿವಾ..? ಸೋನಿಯಾ ಗಾಂಧಿ ನಿವಾಸದಲ್ಲಿ ಏನು ಮಾತನಾಡಿದೆ, ಯಾರ ಯಾರ ಬಳಿ ಏನೇನು ಮಾತನಾಡಿದೆ ಎಂದು ಹೇಳಲ್ಲ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ” ಎಂದರು.