ಕುಮಟಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಡುಗೆ ಅನಿಲದ ದರ ಏರಿಕೆ ಮಾಡಿ ಬಡ ವರ್ಗದ ಜನರಿಗೆ ಕಷ್ಟ ನೀಡುತ್ತಿದೆ ಎಂದು ಆರೋಪಿಸಿ, ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಗಿಬ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಖಾಲಿ ಅನಿಲ ಸಿಲಿಂಡರ್‌ಗಳನ್ನು ರಸ್ತೆಯ ಮೇಲೆ ಇಟ್ಟು ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಗಿಬ್ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ್ ಮಾತನಾಡಿ, “ಕೇಂದ್ರ ಸರ್ಕಾರದ ವೈಫಲ್ಯದಿಂದ ದೇಶದಾದ್ಯಂತ ಅಡುಗೆ ಅನಿಲದ ಕೊರತೆ ಉಂಟಾಗಿದೆ. ಅನಿಲದ ಕೊರತೆಯಿಂದ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಕುಮಟಾದ ಬಹುತೇಕ ಹೊಟೆಲ್‌ಗಳಲ್ಲಿ ನಾಮಫಲಕ ಹಾಕಲಾಗಿದೆ. ಕೇಂದ್ರ ಸರ್ಕಾರಕ್ಕೆ ಸುಳ್ಳು ಹೇಳುವುದು ರೂಢಿಯಾಗಿದೆ. ಮೊದಲು ಅನಿಲದ ಕೊರತೆ ಇಲ್ಲ ಎಂದು ಹೇಳಿ, ನಂತರ ತಕ್ಷಣ ದರ ಏರಿಕೆ ಮಾಡಿದ್ದಾರೆ. ಜನರಿಗೆ ಮೋಸ ಮಾಡುವುದು ಕೇಂದ್ರ ಸರ್ಕಾರದ ರೂಢಿಯಾಗಿದೆ ಎಂದು ಆರೋಪಿಸಿದರು.
ಯುದ್ಧವಾದರೆ ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವು ನಮಗಿದೆ. ಆದರೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಬದಲು ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸಿದೆ. ಯುದ್ಧದ ವಾತಾವರಣ ಇರುವ ಸಂದರ್ಭದಲ್ಲಿ ಮೂರ್ನಾಲ್ಕು ತಿಂಗಳಿಗೆ ಅಗತ್ಯವಿರುವ ಅಡುಗೆ ಅನಿಲದ ದಾಸ್ತಾನು ಇಟ್ಟುಕೊಳ್ಳಬೇಕಾಗಿತ್ತು. ಆದರೆ ಬೇಜವಾಬ್ದಾರಿ ನೀತಿಯಿಂದ ಜನತೆ ಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಅನಿಲದ ದರ ಇಳಿಕೆ ಮಾಡಬೇಕು” ಎಂದು ಆಗ್ರಹಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ಮುಖಂಡರು ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಈಗ ಏನು ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಇಳಿಕೆಯಾದರೂ ಕೇಂದ್ರ ಸರ್ಕಾರ ದೇಶದಲ್ಲಿ ದರ ಇಳಿಕೆ ಮಾಡಿಲ್ಲ. ಜನಸಾಮಾನ್ಯರಿಗೆ ಒಳ್ಳೆಯದು ಮಾಡುವ ಬದಲು ಅವರನ್ನು ಕಷ್ಟಕ್ಕೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಟಾ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮಾತೇ ಇಲ್ಲ. ಶಾಸಕರು ಹತಾಶೆಯಿಂದ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಇನ್ನೊಂದೆಡೆ ಸಚಿವರು ಆಗಮಿಸಿದಾಗ ನಿಮ್ಮ ಸಹಾಯದಿಂದ ಈ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ. ಅಧಿಕಾರದ ಹಿಂದೆ ಓಡುವ ಶಾಸಕರು ಅಧಿಕಾರದ ಆಸೆಯಿಂದ ಜೆಡಿಎಸ್‌ನಿಂದ ಬಿಜೆಪಿಗೆ ಬಂದಿದ್ದಾರೆ ಎಂದು ಟೀಕಿಸಿದರು.
ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದು ಸ್ಪಷ್ಟವಾಗಿದೆ. ನಿಮ್ಮ ಸರ್ಕಾರದಲ್ಲಿ ನೀವು ಶಾಸಕರಾಗಿ ಅಧಿಕಾರ ನಡೆಸಿದ್ದೀರಿ. ಕ್ಷೇತ್ರದ ಯುವಜನತೆಗೆ ಏನು ಉದ್ಯೋಗ ನೀಡಿದ್ದೀರಿ? ಶಾಶ್ವತ ಯೋಜನೆ ಯಾವುದು ಮಂಜೂರು ಮಾಡಿಸಿದ್ದೀರಿ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ರಸ್ತೆ, ಚರಂಡಿ, ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಗಳನ್ನು ಮಾಡಲು ಶಾಸಕರು ಬೇಕೇ? ಇದಕ್ಕೆ ಅಧಿಕಾರಿಗಳೇ ಸಾಕು. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಲೋಕಸಭೆ ಚುನಾವಣಾ ಸಮಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರವಾಗಿದ್ದು, ಕುಮಾರಸ್ವಾಮಿ ನಿಮಗೆ ಟಿಕೆಟ್ ನೀಡುತ್ತಾರೆ ಎಂದು ಜೆಡಿಎಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಶಾಸಕರು ಯಾಕೆ ಬಿಜೆಪಿಯಿಂದ ನನಗೆ ಟಿಕೆಟ್ ಎಂದು ಹೇಳಿಕೆ ನೀಡುತ್ತಿಲ್ಲ? ಇದರಿಂದ ಶಾಸಕರು ಹತಾಶರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರತ್ನಾಕರ ನಾಯ್ಕ, ವಿ.ಎಲ್. ನಾಯ್ಕ, ಮಧುಸೂದನ ಶೇಟ್, ಕೃಷ್ಣಾನಂದ ವೆರ್ಣೇಕರ, ಹೊನ್ನಪ್ಪ ನಾಯಕ, ಅಮೋದ ಸಿರ್ಸಿಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
