Sirsi| ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ ರಸ್ತೆಯ ಇಸಳೂರು ಸಮೀಪದ ದೊಡ್ಡೂರು ಕ್ರಾಸ್ ಬಳಿ ಶನಿವಾರ ನಡೆದಿದೆ.

ಮೃತರನ್ನು ಬುಗುಡಿಕೊಪ್ಪ ಗ್ರಾಮದ ಅನಿಲ್ ನಾಯ್ಕ (30) ಎಂದು ಗುರುತಿಸಲಾಗಿದೆ. ಶಿರಸಿ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆಯ ಹಾನಗಲ್-ಶಿರಸಿ-ಕಾರವಾರ-ಪಣಜಿಗೆ ತೆರಳುತ್ತಿದ್ದ ಬಸ್ (KA 31 F1656) ಮತ್ತು ಬೈಕ್ ನಡುವೆ ಇಸಳೂರು ಸಮೀಪದ ದೊಡ್ಡೂರು ಬಳಿ ಡಿಕ್ಕಿ ಸಂಭವಿಸಿ ಅನಿಲ್ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯ ಗ್ರಾಮಸ್ಥರು ತಕ್ಷಣವೇ ಅಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಶಿರಸಿ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಘಟನೆ ಸಂಬಂಧ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
