Karwar| ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹53.19 ಲಕ್ಷ ವಂಚಿಸಿದ ಘಟನೆ ಅವರ್ಸಾದಲ್ಲಿ ನಡೆದಿದೆ.

ಅವರ್ಸಾದ ಮಠಾಕೇರಿ ನಿವಾಸಿ, ಉದ್ಯಮಿ ಕಮಲಾಕ್ಷ ಆಪಾ ಭಟ್ (52) ಅವರೇ ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ಹಣ ಕಳೆದುಕೊಂಡವರು.

ಪ್ರಕರಣದ ವಿವರ: ಏಪ್ರಿಲ್ 1ರಂದು ಫೇಸ್‌ಬುಕ್ ಬಳಸುತ್ತಿದ್ದ ವೇಳೆ “BXB Market” ಎಂಬ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಂದೇಶ ಬಂದಿತ್ತು. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಗೂಗಲ್ ಫಾರ್ಮ್ ತೆರೆಯಲ್ಪಟ್ಟಿದ್ದು, ಅದರಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ನೋಂದಣಿ ಮಾಡಿಕೊಂಡಿದ್ದರು.
ನಂತರ ನಿಖಿತಾ ಎಂಬ ಹೆಸರಿನ ಮಹಿಳೆ ಕರೆ ಮಾಡಿ BXB Market ಕಂಪನಿಯಿಂದ ಮಾತನಾಡುತ್ತಿರುವುದಾಗಿ ಹೇಳಿ ಖಾತೆ ತೆರೆದಿರುವುದಾಗಿ ತಿಳಿಸಿದ್ದಾಳೆ. ಬಳಿಕ ಟೆಲಿಗ್ರಾಂ ಮೂಲಕ ಸಂಪರ್ಕಿಸಿದ ಸೈಯದ್ ಎಂಬಾತ ತಾನು ಕಂಪನಿಯ ಅಕೌಂಟ್ ಮ್ಯಾನೇಜರ್ ಎಂದು ಹೇಳಿ ಟ್ರೇಡಿಂಗ್ ಕುರಿತು ಮಾರ್ಗದರ್ಶನ ನೀಡಿದ್ದಾನೆ. ಆತನ ಸೂಚನೆಯಂತೆ ಮೊದಲಿಗೆ ₹19,908 ಹೂಡಿಕೆ ಮಾಡಿದ್ದು, ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಮತ್ತು ಲಾಭಾಂಶ ಹೆಚ್ಚುತ್ತಿರುವಂತೆ ತೋರಿಸಲಾಗಿತ್ತು. ನಂತರ ಅಶುತೋಶ್ ಎಂಬ ಮತ್ತೊಬ್ಬ ವ್ಯಕ್ತಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ಭಟ್ಟರಿಗೆ ನಂಬಿಸಿದ್ದಾನೆ. ಇದರಿಂದ ಪ್ರೇರಿತರಾದ ಕಮಲಾಕ್ಷ ಭಟ್ ಅವರು ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಏಪ್ರಿಲ್ 3ರಿಂದ ಮೇ 18ರವರೆಗೆ ಒಟ್ಟು ₹53,19,908 ಹಣ ವರ್ಗಾವಣೆ ಮಾಡಿದ್ದಾರೆ.

ಆದರೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ಯಾವುದೂ ಮರಳಿ ದೊರೆಯದ ಹಿನ್ನೆಲೆಯಲ್ಲಿ ತಾವು ವಂಚನೆಗೊಳಗಾಗಿರುವುದು ತಿಳಿದು, ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.