ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ವಲಯ ವ್ಯಾಪ್ತಿಯ ಶರಾವತಿ ಕಣಿವೆಯ ಸಿಂಗಳಿಕ ಅಭಯಾರಣ್ಯದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ವಿಡಿಯೋ ಚಿತ್ರೀಕರಿಸಿದ ಆರೋಪದಡಿ ‘ಲೋಕಲ್ ಮ್ಯಾಪ್ಸ್’ ತಂಡದ ಐವರು ಅಪರಿಚಿತರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರುಸೊಪ್ಪ ವಲಯದ ಉಪ ಅರಣ್ಯಾಧಿಕಾರಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಜುಲೈ 23ರಂದು ಐವರು ಅಪರಿಚಿತರು ಗೇರುಸೊಪ್ಪ ಸಮೀಪದ ಶರಾವತಿ ಕಣಿವೆಯ ಸಿಂಗಳಿಕ ಅಭಯಾರಣ್ಯದಲ್ಲಿರುವ ಕನ್ನಿಕಾ ಜಲಪಾತ ಪ್ರದೇಶಕ್ಕೆ ಅನಧಿಕೃತವಾಗಿ ಪ್ರವೇಶಿಸಿ, ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯ ಸಾಹಸ ಕೃತ್ಯಗಳನ್ನು ಪ್ರದರ್ಶಿಸುತ್ತಾ ವಿಡಿಯೋ ಚಿತ್ರೀಕರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೀವಕ್ಕೆ ಅಪಾಯ ಉಂಟುಮಾಡುವ ಅಪಾಯಕಾರಿ ಸಾಹಸ ದೃಶ್ಯಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ವಿಡಿಯೋ ಅಪ್‌ಲೋಡ್ ಮಾಡಿರುವ ‘ಲೋಕಲ್ ಮ್ಯಾಪ್ಸ್’ ಫೇಸ್‌ಬುಕ್ ಖಾತೆಯ ಮಾಹಿತಿ ಹಾಗೂ ಸಂಬಂಧಿತ ವ್ಯಕ್ತಿಗಳ ಗುರುತು ಪತ್ತೆ ಮಾಡುವ ಕಾರ್ಯ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ. ಅರಣ್ಯ ಪ್ರದೇಶಗಳಲ್ಲಿ ಅನಧಿಕೃತ ಪ್ರವೇಶ ಹಾಗೂ ಅಪಾಯಕಾರಿ ಸಾಹಸ ಪ್ರದರ್ಶನಗಳು ಕಾನೂನುಬಾಹಿರವಾಗಿದ್ದು, ಜೀವಹಾನಿಗೂ ಕಾರಣವಾಗುವ ಸಾಧ್ಯತೆ ಇರುವುದರಿಂದ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
