ಉಡುಪಿ|ಹೊಟ್ಟೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಮಹಿಳೆಯೋರ್ವರ ಗರ್ಭಕೋಶದ ಆಪರೇಷನ್ ನಡೆಸಿದ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಬರೋಬ್ಬರಿ 8 ಕೆ.ಜಿ ಗಾತ್ರದ ಗರ್ಭಕೋಶದ ಗಡ್ಡೆಯನ್ನು ಹೊರ ತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ.ಕವಿತಾ, ಡಾ.ಅಮೃತಾಂಶ್ ಇವರ ತಂಡ ಮತ್ತು ಅರವಳಿಕೆ ತಜ್ಞರಾದ ಡಾ. ಸೂರ್ಯ ನಾರಾಯಣ, ಡಾ. ರಾಜ್ ಗೋಪಾಲ್ ಭಂಡಾರಿ ಹಾಗೂ ಶುಶ್ರೂಷಕಧಿಕಾರಿ ರಕ್ಷಿತಾ, ಓ.ಟಿ ಸಹಾಯಕಿ ಸಂಗೀತ ಅವರ ಸಹಾಯದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಮಹಿಳೆಗೆ ಕಳೆದ 1 ವರ್ಷದಿಂದ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ಖಾಸಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾಗದ ಕಾರಣ ಈ ಮಹಿಳೆಯು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದು, ತಜ್ಞ ವೈದ್ಯರು ಆ ಮಹಿಳೆಯನ್ನು ತಪಾಸಣೆ ಮಾಡಿಸಿದಾಗ ರೋಗಿಯ ಹೊಟ್ಟೆಯು ಗರ್ಭಿಣಿಯ ಹೊಟ್ಟೆಯ ರೀತಿಯಲ್ಲಿ, ನೀರು ತುಂಬಿದ ಗೆಡ್ಡೆಯ ಸ್ಥಿತಿಯಲ್ಲಿ ಕಂಡುಬಂದಿತ್ತು.
ನಂತರ ಹೊಟ್ಟೆಯ ಅಲ್ಟ್ರಾಸೌಂಡ್ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಿದಾಗ ಗರ್ಭಕೋಶದಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ನಂತರ ಈ ಶಸ್ತ್ರಚಿಕಿತ್ಸೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಸಬೇಕೆಂದು ನಿರ್ಧರಿಸಿದ್ದು, ತಜ್ಞ ವೈದ್ಯರ ತಂಡ ಜಿಲ್ಲಾ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಹೆಚ್. ಅಶೋಕ್ ಅವರಲ್ಲಿ ಚರ್ಚಿಸಿತ್ತು. ಅವರ ಸಲಹೆಯಂತೆ ಮೇ 25ರಂದು ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಯಶ್ವಸಿಯಾಗಿ 8 ಕೆ.ಜಿ. ಗಡ್ಡೆಯನ್ನು ಹೊರ ತೆಗೆಯಲಾಗಿದೆ.
ಇಷ್ಟೊಂದು ದೊಡ್ಡ ಗಾತ್ರದ ಗರ್ಭಕೋಶದ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಇಡೀ ತಜ್ಞ ವೈದ್ಯರ ತಂಡ ಹಾಗೂ ಸಿಬ್ಬಂದಿಯ ಕಾರ್ಯವೈಕರಿಗೆ ಜಿಲ್ಲಾ ಸರ್ಜನ್ ಡಾ. ಅಶೋಕ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
