Honavar| ತಾಲೂಕಿನ ಕಾಸರಕೋಡ ಟೊಂಕ ಕಡಲತೀರದಲ್ಲಿ ರಿಡ್ಲೆ ಜಾತಿಯ ಕಡಲಾಮೆ ಮರಿಗಳನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು.

ಗೂಡಿನಲ್ಲಿ ಇಟ್ಟಿದ್ದ 113 ಮೊಟ್ಟೆಗಳ ಪೈಕಿ 102 ಮೊಟ್ಟೆಗಳು ಯಶಸ್ವಿಯಾಗಿ ಒಡೆದು ಮರಿಗಳು ಹೊರಬಂದಿವೆ. ಈ ಮರಿಗಳನ್ನು ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಭಾನುವಾರ ಮುಂಜಾನೆ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಯಿತು.

ಈ ಕಾರ್ಯದಲ್ಲಿ ಸ್ಥಳೀಯ ಜೈನಜಟಕೇಶ್ವರ ಸಂಘದ ಭಾಸ್ಕರ್ ತಾಂಡೇಲ, ರಮೇಶ್ ತಾಂಡೇಲ ಮತ್ತು ರಾಜುದತ್ತ ತಾಂಡೇಲ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಆಮೆ ಗೂಡುಗಳ ರಕ್ಷಣೆಗೆ ನಿಯೋಜಿಸಲಾದ ಅರಣ್ಯ ಇಲಾಖೆಯ ಉದಯ ತಾಂಡೇಲ ಮತ್ತು ಗುರು ಮಾದೇವ ತಾಂಡೇಲ ಸೇರಿದಂತೆ ವಿಠ್ಠಲ ತಾಂಡೇಲ, ಗಣಪತಿ ತಾಂಡೇಲ ಮತ್ತಿತರರು ಉಪಸ್ಥಿತರಿದ್ದರು.

ಕಡಲಾಮೆಗಳ ಸಂರಕ್ಷಣೆಗಾಗಿ ಸ್ಥಳೀಯರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಈ ರೀತಿಯ ಕಾರ್ಯಗಳು ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿವೆ.

ಆಲಿವ್ ರಿಡ್ಲೆ ಎಲ್ಲಾ ಸಮುದ್ರ ಆಮೆ ಪ್ರಭೇದಗಳಲ್ಲಿ ಚಿಕ್ಕದಾಗಿದೆ. ಅದರ ಕ್ಯಾರಪೇಸ್ (ಚಿಪ್ಪು) ನ ಆಲಿವ್ ಹಸಿರು ಬಣ್ಣದಿಂದ ಇದಕ್ಕೆ ಈ ಹೆಸರು ಬಂದಿದೆ. ಆಲಿವ್ ರಿಡ್ಲೆಗಳು ತಮ್ಮ ಅರಿಬಾಡಾಸ್ ಅಥವಾ ಸಿಂಕ್ರೊನೈಸ್ಡ್ ಸಾಮೂಹಿಕ ಗೂಡುಕಟ್ಟುವಿಕೆಗೆ ಹೆಸರುವಾಸಿಯಾಗಿದೆ. ಈ ಸಮಯದಲ್ಲಿ ನೂರಾರು ಸಂಖ್ಯೆಯ ಹೆಣ್ಣು ರಿಡ್ಲೆಗಳು ಕೆಲವು ದಿನಗಳ ಅವಧಿಯಲ್ಲಿ ಗೂಡು ಕಟ್ಟಲು ತೀರಕ್ಕೆ ಬರುತ್ತವೆ. ಮತ್ತು ಮೊಟ್ಟೆಗಳು ಹೊರಬಂದಾಗ, ಲಕ್ಷಾಂತರ ಆಲಿವ್ ರಿಡ್ಲೆ ಆಮೆ ಮರಿಗಳು ಹೊರಹೊಮ್ಮಿ ಸಮುದ್ರಕ್ಕೆ ಮರಳುತ್ತವೆ.