Karwar: ಸೋಮವಾರ ತಡ ರಾತ್ರಿ ಗೋವಾದ ಪೋಳೆಂ (Polelem) ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕಾರವಾರ ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಿತ್ರದುರ್ಗ ಮೂಲದ ಮೂರನೇಯ ವರ್ಷದ ವೈದ್ಯಕೀಯ ವಿದ್ಯಾರ್ಥಿ ಪ್ರೀತಮ್ ಮೃತಪಟ್ಟಿದ್ದಾನೆ. ಇನ್ನೋರ್ವ ಗದಗ ಮೂಲದ ಬಸವರಾಜ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ತನ್ನದೇ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾರವಾರ ನಗರದಿಂದ ಗೋವಾ ಗಡಿಗೆ ಕೇವಲ ಹನ್ನೊಂದು ಕಿ.ಮೀ ದೂರವಿರುವುದರಿಂದ, ಸರ್ಕಾರಿ ವೈದ್ಯಕೀಯ ಕಾಲೇಜಿನ ಹಲವು ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ನಿತ್ಯ ಮೋಜು-ಮಸ್ತಿಗಾಗಿ, ಜಾಲಿರೈಡ್ ಗಾಗಿ ಗೋವಾಕ್ಕೆ ತೆರಳುತ್ತಿದ್ದಾರೆ ಎಂಬುದು ಬಹಳ ದಿನದಿಂದ ಸಾರ್ವಜನಿಕ ವಲಯಗಳಲ್ಲಿ ಕೇಳಿ‌ಬರುತ್ತಿರುವ ದೂರು.

ಕೆಲ ವಿದ್ಯಾರ್ಥಿಗಳು ಪೋಳೆಂ, ಕಾಣಕೊಣಕ್ಕೆ ತೆರಳಿ ಮದ್ಯಪಾನ ಮಾಡಿ, ತಡರಾತ್ರಿ ವಾಹನ ಚಲಾಯಿಸಿಕೊಂಡು ಹಾಸ್ಟೆಲ್‌ಗೆ ಮರಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಒಂದೇ ವರ್ಷದ ಅವಧಿಯಲ್ಲಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಸಾಲಿಗೆ ಇನ್ನೊಂದು ಎನ್ನುವಂತೆ ಸೋಮವಾರ ಘಟನೆ ಸೇರ್ಪಡೆಯಾಗಿದೆ.

ವೈದ್ಯಕೀಯ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು ಮೋಜು-ಮಸ್ತಿಯಲ್ಲಿ ತೊಡಗಿರುವುದು ದುರಂತಕರ ಬೆಳವಣಿಗೆ ಎಂಬುದು ಹಲವರ ಅಳಲು.

ಕಾಲೇಜು ಆಡಳಿತ ಹಾಗೂ ಹಾಸ್ಟೆಲ್ ಸಿಬ್ಬಂದಿಗಳು ವಿದ್ಯಾರ್ಥಿಗಳ ಸ್ವಚ್ಛಂದ ಪ್ರವೃತ್ತಿ ಒಂದಿಷ್ಟು ಕಡಿವಾಣ ಹಾಕಲೇಬೇಕಾಗಿದೆ. ತಡರಾತ್ರಿವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ‌ ನಿರ್ಬಂಧ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಪಾಲಕರು ಸಾಲ ಮಾಡಿ ಮಕ್ಕಳನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ಕಳುಹಿಸುತ್ತಾರೆ. ಆದರೆ ಕೆಲವರು ಮೋಜಿನ ಜೀವನಕ್ಕೆ ಮರಳಾಗಿ ಪಾಲಕರ ಕನಸು ನುಚ್ಚುನೂರು ಮಾಡುತ್ತಿರುವುದು ದುಃಖಕರ ಸಂಗತಿ. ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಕಟ್ಟುನಿಟ್ಟಿನ ನಿಯಮಗಳು ಇಲ್ಲದ ಕಾರಣ ಇಂತಹ ಅಪಘಾತಗಳು ಮರುಕಳಿಸುತ್ತಿವೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.