Haliyal: ಕಾಳಿ ನದಿ ಯೋಜನೆ, ಕುಡಿಯುವ ನೀರಿನ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಷ್ಠಾನದಲ್ಲಿ ಭಾರೀ ವಿಳಂಬವನ್ನು ಖಂಡಿಸಿ ಸೋಮವಾರ ಕಬ್ಬು ಬೆಳೆಗಾರರ ಸಂಘಟನೆ ಕರೆ ನೀಡಿದ ಹಳಿಯಾಳ ಬಂದ್ ಗೆ‌ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿರುವುದನ್ನು ವಿರೋಧಿಸಿ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟಿ, ಮುಖಂಡ ನಾಗೇಂದ್ರ ಜಿವೊಜಿ ನೇತೃತ್ವದಲ್ಲಿ ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಸಾರ್ವಜನಿಕರು ಕೂಡಾ ಬಂದ್‌ಗೆ ಸಾಥ್ ನೀಡಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್  ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಪಟ್ಟಣದಲ್ಲಿ ಭಾಗಶಃ ಸ್ಥಗಿತದ ವಾತಾವರಣ ನಿರ್ಮಾಣವಾಗಿದೆ.

ಕಾಳಿ ನದಿ ನೀರಿನ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಬೇಕು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು‌ ಎಂಬಿತ್ಯಾದಿ ಬೇಡಿಕೆ‌ ಜತೆ ಕಬ್ಬು ಬೆಳೆಗಾರರ ಸಂಘ ಹಲವು‌ ದಿನಗಳ ಹೋರಾಟ ಪ್ರಾರಂಭಿಸಿತ್ತು. ಗ್ರಾಮ ಗ್ರಾಮಗಳಿಗೆ ತೆರಳಿ ಜಾಗೃತಿ ಪಾದಯಾತ್ರೆ ಕೂಡಾ ಮಾಡಿತ್ತು. ಇಂದು ಹೋರಾಟ ತೀವ್ರಗೊಂಡಿದ್ದು ಹಳಿಯಾಳ ನಗರವಂತೂ ಭಾಗಶಃ ಬಂದ್ ಆಗಿದೆ.

 ರೈತ ಮುಖಂಡ ಕುಮಾರ್ ಬೊಬಾಟಿ ಮಾತನಾಡಿ,
‘ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಂದಿನ ಬಂದ್ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕೂಡಲೇ ಯೋಜನೆಗಳು ಜಾರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ನೇತೃತ್ವದಲ್ಲಿ ಭಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.