Karwar| ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಕೈಗೊಂಡಿರುವ ಬದಲಾವಣೆಗಳು ಅತ್ಯಂತ ದುರದೃಷ್ಟಕರ ಮತ್ತು ವಿದ್ಯಾರ್ಥಿ ವಿರೋಧಿಯಾಗಿವೆ ಎಂದು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾಗೇರಿ, ದಶಕಗಳಿಂದಲೂ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಕೊಡಲಿ ಪೆಟ್ಟು ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಅಪ್ರಬುದ್ಧ ನಿರ್ಧಾರವು ರಾಜ್ಯದ ಶೈಕ್ಷಣಿಕ ಘನತೆಗೆ ದೊಡ್ಡ ಧಕ್ಕೆ ತಂದಿದೆ. ತೃತೀಯ ಭಾಷೆಯ ಅಂಕಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಗ್ರೇಡ್ ಪದ್ಧತಿಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.
ನಮ್ಮ ರಾಜ್ಯದ ಮಕ್ಕಳು ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್ ಅನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿ ಅಥವಾ ಸಂಸ್ಕೃತವನ್ನು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಕಲಿಯುತ್ತಿದ್ದರು. ಆದರೆ, ಈಗ ತೃತೀಯ ಭಾಷೆಯು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಸ್ಥಿತಿಗೆ ತಲುಪಿದ್ದು, ಇದು ಮಕ್ಕಳ ಭಾಷಾ ಸಾಮರ್ಥ್ಯವನ್ನು ತೀವ್ರವಾಗಿ ಕುಂಠಿತಗೊಳಿಸಲಿದೆ. ಶಿಕ್ಷಣ ಇಲಾಖೆಯು ಕೇವಲ ಅಂಕಗಳ ಕಡಿತದ ಮೇಲೆ ಗಮನ ಹರಿಸುತ್ತಿದೆಯೇ ಹೊರತು, ಗುಣಮಟ್ಟದ ಕಲಿಕೆಯ ಮೇಲಲ್ಲ ಎಂಬುದು ಈ ನಿರ್ಧಾರದಿಂದ ಸ್ಪಷ್ಟವಾಗುತ್ತದೆ. ಸಾರ್ವಜನಿಕವಾಗಿ ಅಥವಾ ಶಿಕ್ಷಣ ತಜ್ಞರ ಜೊತೆ ಯಾವುದೇ ಪೂರ್ವಭಾವಿ ಚರ್ಚೆ ನಡೆಸದೆ, ಏಕಾಏಕಿ ಇಂತಹ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸುತ್ತಿರುವುದು ಸಚಿವರ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ಶಿಕ್ಷಣ ಕ್ಷೇತ್ರವು ರಾಜಕೀಯ ಪ್ರಯೋಗಶಾಲೆಯಲ್ಲ. ಒಬ್ಬ ಮಾಜಿ ಶಿಕ್ಷಣ ಸಚಿವನಾಗಿ ನಾನು ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ಸಚಿವರ ಈ ಅಪ್ರಬುದ್ಧ ನಿರ್ಧಾರವು ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಿನ್ನೆಡೆ ಅನುಭವಿಸುವಂತೆ ಮಾಡಲಿದೆ. ರಾಜ್ಯದ ಮುಖ್ಯಮಂತ್ರಿಗಳು ಇಂತಹ ಗಂಭೀರ ಶೈಕ್ಷಣಿಕ ವಿಚಾರಗಳ ಬಗ್ಗೆ ಗಮನಹರಿಸುವ ಬದಲು, ಕೇವಲ ಅಧಿಕಾರ ಹಸ್ತಾಂತರದ ಚಿಂತೆಯಲ್ಲೇ ಮುಳುಗಿರುವುದು ರಾಜ್ಯದ ದೌರ್ಭಾಗ್ಯವಾಗಿದೆ. ಸರ್ಕಾರವು ಕೂಡಲೇ ಈ ಆದೇಶವನ್ನು ರದ್ದುಗೊಳಿಸಬೇಕು ಹಾಗೂ ಭಾಷಾ ತಜ್ಞರು ಮತ್ತು ಸಾಹಿತಿಗಳ ಸಮ್ಮುಖದಲ್ಲಿ ಪಾರದರ್ಶಕ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕೆಂದು ಸಂಸದ ಕಾಗೇರಿ ಸಲಹೆ ನೀಡಿದ್ದಾರೆ.
