ಕುಮಟಾ : ತಾಲೂಕಿನ ಬಾಡ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಓಡಾಟದ ಸುದ್ದಿ ಹಬ್ಬಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇನ್ನು ಚಿರತೆ ಹಿಡಿಯೋಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾತ್ರ ಖಾಲಿ ಬೋನಿಟ್ಟು ಹೋದ ವಿಷಯ ಈಗ ಗ್ರಾಮಸ್ಥರಿಗೆ ಹಾಸ್ಯಾಸ್ಪದ ವಾಗಿದೆ.
ಹೌದು ಬಾಡ ಗ್ರಾಮದ ಕಳಸನಮನೆ ಅಕ್ಕ ಪಕ್ಕ ನಿನ್ನೆ ರಾತ್ರಿ ಚಿರತೆ ಬಂದು ಸಾಕಿದ ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿತ್ತು. ಆದರೆ ಚಿರತೆಯನ್ನು ಯಾರೂ ನೋಡಿಲ್ಲ, ಬದಲಾಗಿ ನಾಯಿಯ ಮೇಲಿನ ಆಕ್ರಮಣದ ಶೈಲಿ ಹಾಗೂ ಅಕ್ಕ ಪಕ್ಕದ ಹೆಜ್ಜೆಗುರುತು ನೋಡಿ ಗ್ರಾಮಸ್ಥರು ಚಿರತೆಯೇ ಇರಬಹುದು ಎಂದು ಅಂದಾಜಿಸಿದ್ದರು.
ಇನ್ನು ಕಳೆದ ವಾರ ಬಾಡಗ್ರಾಮದ ಗುಡೇಅಂಗಡಿಯ ಬಳಿಯೂ ಚಿರತೆ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಇಂದು ಬಾಡಕ್ಕೆ ಬಂದು ಪರಿಶೀಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹೆಜ್ಜೆ ಗುರುತನ್ನು ನೋಡಿ ಇದು ಚಿರತೆಯ ಹೆಜ್ಜೆಯ ಗುರುತೇ ಆಗರಿಬಹುದು. ಸ್ವಲ್ಪ ಹುಷಾರಾಗಿ ಇರಿ ಎಂದು ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ ಚಿರತೆ ಸರೆ ಹಿಡಿಯಲು ಇಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನನ್ನು ತಂದು ಕಳಸದ ಮನೆಯ ಪಕ್ಕ ಇಟ್ಟಿದ್ದಾರೆ. ಚಿರತೆಯನ್ನು ಆಕರ್ಷಿಸಲು ಬೋನಿಗೆ ಮಾಂಸವನ್ನೋ ಅಥವಾ ಶ್ವಾನವನ್ನೋ ಕಟ್ಟಬೇಕಿತ್ತು. ಅದ್ಯಾವುದನ್ನೂ ಮಾಡದೇ ಕೇವಲ ಖಾಲಿ ಬೋನನ್ನು ಇಟ್ಟು ಆ ಬೋನು ಕವರ್ ಆಗುವ ಹಾಗೆ ಸಿ.ಸಿ ಟಿವಿ ಅಳವಡಿಸಿ ಹೋಗಿದ್ದಾರೆ.
ಅರಣ್ಯ ಇಲಾಖೆಯವರ ಈ ನಡೆ ಗ್ರಾಮಸ್ಥರಿಗೆ ಹಾಸ್ಯಾಸ್ಪದ ಎನಿಸಿದೆ. “ಮನೆಲಿ ಸಾಕಿದ ಕೋಳಿ ಮರಿ ಹಿಡಿಯೋಕೆ ಅಕ್ಕಿ ಕಾಳು ಹಾಕ್ಬೇಕು.. ಇನ್ನೂ ಖಾಲಿ ಬೋನಿಗೆ ಹೊಕ್ಕಿ ಅರೆಸ್ಟ್ ಆಗೋಕೆ ಚಿರತೆಗೇನು ಬುದ್ದಿ ಇಲ್ವಾ…?” ಎನ್ನೋ ಮಾತು ಗ್ರಾಮಸ್ಥರಿಂದ ಕೇಳಿಬಂತು…
