Karwar|​ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಒಟ್ಟು ₹ 74.12 ಕೋಟಿಯ ಬೃಹತ್ ಮೊತ್ತ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾಗೇರಿ, ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ಹಾಗೂ ಕೃಷಿಕರ ವಿಷಯದಲ್ಲಿ ತೋರುತ್ತಿರುವ ನಿಷ್ಕಾಳಜಿಯಿಂದಾಗಿ ಈ ವರ್ಷವೂ ಬೆಳೆ ವಿಮೆಯು ರೈತರಿಗೆ ಲಭಿಸದೇ ಕೇವಲ ಮರೀಚಿಕೆಯಾಗುವ ಸಂಭವವಿತ್ತು. ಆದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸತತವಾಗಿ ಪ್ರಯತ್ನಿಸಿ, ಸಂಬಂಧಪಟ್ಟ ಕೇಂದ್ರ ಕೃಷಿ ಸಚಿವಾಲಯದಿಂದ ವಿಮಾ ಕಂಪನಿ ಮೇಲೆ ಒತ್ತಡ ಹೇರುವ ಮೂಲಕ ಈ ವಿಮಾ ಮೊತ್ತವು ಬಿಡುಗಡೆಯಾಗಿದೆ.

​ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಎಲೆ ಚುಕ್ಕಿ ರೋಗ ಹಾಗೂ ಅಡಿಕೆ ಇಳುವರಿ ಕುಂಠಿತದಿಂದ ಕಂಗಾಲಾಗಿದ್ದ ರೈತರಿಗೆ ಈ ಪರಿಹಾರವು ಆರ್ಥಿಕ ಸಂಜೀವಿನಿಯಾಗಿದೆ. ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅಡಿಕೆ, ಮಾವು, ಕಾಳುಮೆಣಸು ಮತ್ತು ಶುಂಠಿ ಬೆಳೆಗಾರರ ಒಟ್ಟು 90,235 ಪ್ರಸ್ತಾವನೆಗಳನ್ನು ಪುರಸ್ಕರಿಸಿ, 20,702.88 ಹೆಕ್ಟೇರ್ ಪ್ರದೇಶಕ್ಕೆ ಈ ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗಳಿಗೆ ಹಣ ತಲುಪಿಸುವ ಪ್ರಕ್ರಿಯೆಯು ಈಗ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಸಂಬಂಧಪಟ್ಟ ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳುವಂತೆ ಕಾಗೇರಿ, ಪ್ರಕಟಣೆಯಲ್ಲಿ ಕೋರಿದ್ದಾರೆ.