ನವದೆಹಲಿ| ದೇಶದ ಮುಂದಿನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್‌.ಎಸ್‌.ರಾಜಾ ಸುಬ್ರಮಣಿ ಅವರನ್ನು ಭಾರತ ಸರ್ಕಾರ ನೇಮಕ ಮಾಡಿದೆ. ಅವರು ರಕ್ಷಣಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಸಹ ಕಾರ್ಯನಿರ್ವಹಿಸಲಿದ್ದಾರೆ.

ಪ್ರಸ್ತುತ ಸಿಡಿಎಸ್ ಆಗಿರುವ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿ 2026ರ ಮೇ 30ರಂದು ಪೂರ್ಣಗೊಳ್ಳಲಿದ್ದು, ಅದರ ಬಳಿಕ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕರಿಸಲಿದ್ದಾರೆ.
ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ರಾಜಾ ಸುಬ್ರಮಣಿ ಅವರು ಪರಂ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಅವರು 2025ರ ಸೆಪ್ಟೆಂಬರ್‌ನಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದಲ್ಲಿ (NSCS) ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥ (Vice Chief of Army Staff) ಹಾಗೂ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪಶ್ಚಿಮ ಹಾಗೂ ಉತ್ತರ ಗಡಿಭಾಗಗಳಲ್ಲಿ ಮಹತ್ವದ ಕಾರ್ಯಾಚರಣೆಗಳನ್ನು ಮುನ್ನಡೆಸಿದ ಅನುಭವ ಹೊಂದಿರುವ ರಾಜಾ ಸುಬ್ರಮಣಿ ಅವರ ನೇಮಕಾತಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.