ನವದೆಹಲಿ| ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಸ್ತುತ ಅವರು ಮುಂಬೈನ ಪಶ್ಚಿಮ ನೌಕಾ ಕಮಾಂಡ್‌ನ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 31ರಂದು ಅವರು ನೂತನ ನೌಕಾಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದು, 2028ರ ಡಿಸೆಂಬರ್ 31ರವರೆಗೆ ಅವರ ಅಧಿಕಾರಾವಧಿ ಇರಲಿದೆ.
1987ರ ಜುಲೈ 1ರಂದು ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಯಾದ ಕೃಷ್ಣ ಸ್ವಾಮಿನಾಥನ್ ಅವರು ಸಂವಹನ ಹಾಗೂ ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ ವಿಭಾಗದಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಯುನೈಟೆಡ್ ಕಿಂಗ್‌ಡಮ್‌ನ ಜಾಯಿಂಟ್ ಸರ್ವಿಸಸ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜು, ಕರಂಜಾದ ನೌಕಾ ಯುದ್ಧ ಕಾಲೇಜು ಹಾಗೂ ಅಮೆರಿಕದ ರೋಡ್ ಐಲ್ಯಾಂಡ್‌ನ ಯುನೈಟೆಡ್ ಸ್ಟೇಟ್ಸ್ ನೇವಲ್ ವಾರ್ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ದೀರ್ಘಕಾಲದ ಸೇವಾ ಅನುಭವ ಹಾಗೂ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಹಿನ್ನೆಲೆ, ಅವರ ನೇಮಕಾತಿಗೆ ನೌಕಾಪಡೆ ವಲಯದಲ್ಲಿ ಮಹತ್ವ ಸಿಕ್ಕಿದೆ.
