Karwar| ಪ್ರಶಿಕ್ಷಣ ವರ್ಗ ಪಕ್ಷದ ಮೇಲಿನ ಬದ್ಧತೆ ಮತ್ತು ವೈಚಾರಿಕತೆಯನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ. ಇದು ಕಾರ್ಯಕರ್ತರ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಕಾರವಾರದ ಮುರಳೀಧರ ಮಠ ಇಂದಿರಾಕಾಂತ ಸಭಾಭವನದಲ್ಲಿ ನಗರ ಮಂಡಲದಿಂದ ಹಮ್ಮಿಕೊಂಡ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮಕ್ಕೆ ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಇಂದು ಅಗಾಧವಾಗಿ ಬೆಳೆಯಲು ಕಾರ್ಯಕರ್ತರ ಶ್ರಮ ಅಪಾರವಾದದ್ದು. ಕಾರ್ಯಕರ್ತರೇ ಪಕ್ಷಕ್ಕೆ ಆಧಾರಸ್ತಂಭ. ಪ್ರಶಿಕ್ಷಣ ವರ್ಗದಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಗರ ಮಂಡಲ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ನಾಯಕ, ನಗರ ಮಂಡಲ್ ಪ್ರಭಾರಿ ರಾಜು ಭಂಡಾರಿ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಶುಭಾಷ ಗುನಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
