Karwar| ಹೆಚ್ಚಿನ ಹಣಗಳಿಕೆಯ ದುರಾಸೆಗೆ ನಿವೃತ್ತ ಸರಕಾರಿ‌ ನೌಕರರೊಬ್ಬರು ಬರೊಬ್ಬರಿ ₹21.76 ಲಕ್ಷ ಕಳೆದುಕೊಂಡಿದ್ದಾರೆ.

ಮಲ್ಲಾಪುರದ ಕೈಗಾ ಟೌನಶಿಪ್ ನ ಸಿ-59 ನ ಹಾಲಿ‌ ನಿವಾಸಿ ಹಾಗೂ ಶಿರಸಿಯ ಗಾಳಿಮಾಸ್ತಿ ದೇವಸ್ಥಾನ ರಸ್ತೆಯ ಡೊನ್ ಬಾಸ್ಕೊ‌ ಚರ್ಚ್ ಮೂಲದ ಮೆಥ್ಯು ಡಿಯೋಗ ಫರ್ನಾಂಡಿಸ್ (60) ಎಂಬುವರೇ ಹಣ ಕಳೆದುಕೊಂಡವರು.

ಘಟನೆಯ ವಿವರ: ನಿವೃತ್ತ ನೌಕರ‌ ಮೆಥ್ಯು ಡಿಯೋಗ ಫರ್ನಾಂಡಿಸ್ ಇವರ ಮೊಬೈಲ್ ಸಂಖ್ಯೆಗೆ 7078089255 ರಿಂದ 222 VIP NEW BERRY CORE STATERGY ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಅತೀ ಹೆಚ್ಚು ಹಣಗಳಿಸಬಹುದು ಎಂಬ ಸಂದೇಶ ಬಂದಿದೆ. ಆಗ ಮೆಥ್ಯು ಅವರು ಸಂದೇಶದ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿದಾಗ ಮೀನಾ ಜೋಶಿ ಹಾಗೂ ರಾಜೇಶ ಮೊಡಿ ಎಡ್ಮಿನ್ ಆಗಿರುವ NBCPL (New Berry Credit pvt Ltd Mumbai) ಎಂಬ ಹೆಸರಿನ ಟ್ರೇಡಿಂಗ ಆ್ಯಪ್ ನ ವಾಟ್ಸಪ್ ಗೂಪ್‌ಗೆ ಸೇರ್ಪಡೆಗೊಂಡಿದ್ದಾರೆ. ತಮ್ಮ NBCPIL ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶವನ್ನು ಹೇಗೆ ಪಡೆಯಬಹುದು ಎಂದು ಅವರು ಮ್ಯಾಥ್ಯು ಅವರಿಗೆ ತಿಳಿ ಹೇಳಿದ್ದಾರೆ. ಅವರು ಹೇಳಿದಂತೆ ಈ ನಿವೃತ್ತ ನೌಕರ ಹಣ ಹೂಡಿಕೆ ಮಾಡಲು ಪ್ರಾರಂಭಿಸಿ, ಅವರು ನೀಡಿರುವ ಬ್ಯಾಂಕ ಖಾತೆಗಳಿಗೆ ಹಂತ ಹಂತವಾಗಿ ಒಟ್ಟೂ ರೂ ₹ 21,76,100 ಜಮಾ ಮಾಡಿದ್ದಾರೆ.

ನಂತರ ಹಲವು ದಿನ ಕಳೆದರೂ ತಾವು ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಲಾಭಾಂಶದ ಹಣ ಅಥವಾ ಹೂಡಿಕೆ ಮಾಡಿದ ಹಣ ಬಿಡಿಗಾಸು ಸಹ ದೊರೆಯದಿದ್ದಾಗ ನಿವೃತ್ತ ನೌಕರ ಕಂಗಾಲಾಗಿದ್ದಾನೆ. ತಾನು ಮೋಸ ಹೋಗಿರುವುದನ್ನು ಅರಿತು,ನಂತರ ಈ ಬಗ್ಗೆ ಕಾರವಾರದ ಸೈಬರ್ ಅಪರಾಧ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸರು
ಮಾಹಿತಿ ತಂತ್ರಜ್ಞಾನ -2000 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.