Bhatkal| ಧ್ವಂಸಗೊಳಿಸಲಾದ ಮುರಿನಕಟ್ಟೆಯ ಪುನರ್ ನಿರ್ಮಾಣ ಕಾರ್ಯ ಕೂಡಲೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಮುರಿನಕಟ್ಟೆ ಸ್ಥಳಕ್ಕೆ ಭೇಟಿ ನೀಡಿ, ಕಟ್ಟೆಯ ಪುನರ್ ನಿರ್ಮಾಣದ ನೀಲನಕ್ಷೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಂತರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಡೀ ತಾಲೂಕು ದುಃಖದಲ್ಲಿದ್ದ ಮೇ. 24 ರಂದು ಕೆಲ ಮತಾಂಧ ಮುಸ್ಲಿಂ ದುಷ್ಕರ್ಮಿಗಳು ಮುರಿನಕಟ್ಟೆಯನ್ನು ಧ್ವಂಸಗೊಳಿಸಿದ್ದಾರೆ. ಇದು ಖಂಡನೀಯ ಎಂದರು.

ಮುರಿನಕಟ್ಟೆ ಪುನ‌ರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಅಂತಿಮವಾಗಿ ನಮ್ಮ ಧಾರ್ಮಿಕ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ, ಹಿಂದೆ ಇದ್ದ ಸ್ಥಳದಲ್ಲಿಯೇ ಮುರಿನಕಟ್ಟೆಯನ್ನು ಮರುಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನ ಮುರಿನಕಟ್ಟೆ ವಿವಾದ ಕೇವಲ ಭಟ್ಕಳಕ್ಕೆ ಸೀಮಿತವಾಗಿರದೆ ಇಡೀ ರಾಜ್ಯದ ಗಮನ ಸೆಳೆದಿದೆ. ಕಟ್ಟೆಯನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಬಿಜೆಪಿ ಈಗಾಗಲೇ ಸಹಸ್ರಾರು ಜನರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಈ ಅನ್ಯಾಯದ ವಿರುದ್ಧ ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸಿದರೂ ನಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದು ಅವರು ಹೇಳಿದರು.

ಹೆದ್ದಾರಿ ಇಲಾಖೆಯೊಂದಿಗೆ ಚರ್ಚಿಸಿದಂತೆ ಈಗಾಗಲೇ ಹೊಸ ನೀಲನಕ್ಷೆ ಸಿದ್ಧಪಡಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಜಾಗ ಗುರುತಿಸಿ, ಆದಷ್ಟು ಶೀಘ್ರದಲ್ಲಿ ಕಟ್ಟೆ ನಿರ್ಮಾಣ ಮಾಡಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಲೈಟಿಂಗ್, ಗ್ರಿಲ್ಸ್ ಅಳವಡಿಸುವುದರ ಜೊತೆಗೆ ಅದರ ಪಕ್ಕದಲ್ಲೇ ಬಸ್ ಬೇ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ವಶಪಡಿಸಿಕೊಂಡ ಜಾಗವನ್ನು ಅತಿಕ್ರಮಣ ಮಾಡಲು ಬಿಡುವುದಿಲ್ಲ. ಕಾನೂನಾತ್ಮಕವಾಗಿ ಎಲ್ಲಾ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಮುಗಿಸಲಾಗುವುದು. ತಮಗೆ ಯಾವುದೇ ಸಂಬಂಧವಿಲ್ಲದಿದ್ದರೂ ಭಟ್ಕಳದಲ್ಲಿ ಕೆಲ ಮುಸ್ಲಿಂ ಯುವಕರು ಶಾಂತಿ ಕದಡುವ ಯತ್ನ ಮಾಡಿರುವುದನ್ನು ಎಂದಿಗೂ ಸಹಿಸುವುದಿಲ್ಲ. ಇಂತಹವರ ಆಟ ಭಟ್ಕಳದಲ್ಲಿ ನಡೆಯುವುದಿಲ್ಲ ಎಂದು ಕಾಗೇರಿ ಎಚ್ಚರಿಕೆ ನೀಡಿದರು.

​ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ, ಗೋವಿಂದ ನಾಯ್ಕ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.