Honavar| ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಕಡಲತೀರಕ್ಕೆ ಸತತ 6 ನೇ ಬಾರಿ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಇದರ ಅಂಗವಾಗಿ ಕಾಸರಕೋಡ ಕಡಲತೀರದಲ್ಲಿ ಭಾನುವಾರ ಬ್ಲೂ ಫ್ಲಾಗ್ ನ ಧ್ವಜಾರೋಹಣವನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಈ ವರ್ಷ 14 ಕಡಲತೀರಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ ದೊರೆತಿದ್ದು, ಕರ್ನಾಟಕದಲ್ಲಿ ಮೂರು ಕಡಲತೀರಗಳು ಈ ಪಟ್ಟಿಗೆ ಸೇರಿವೆ. ಅವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡ ಕಡಲತೀರವೂ ಒಂದಾಗಿದ್ದು, ಕಾಸರಕೋಡ ಕಡಲತೀರಕ್ಕೆ ಇದು ಆರನೇ ಬಾರಿ ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆತಿದೆ. ಇಲ್ಲಿನ ಕಡಲತೀರದ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ, ಉತ್ತಮ ಮೂಲ ಸೌಕರ್ಯಗಳ ವ್ಯವಸ್ಥೆ ಹಾಗೂ ನೈಸರ್ಗಿಕ ವಸ್ತುಗಳ ಬಳಕೆಯ ಮೂಲಕ ಅಭಿವೃದ್ಧಿಪಡಿಸಿರುವುದನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದರು.
ಕಾಸರಕೋಡು ಕಡಲತೀರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಭಾರತ ಸರ್ಕಾರದಿಂದ ಸ್ವಚ್ಛತಾ ಯಂತ್ರಗಳನ್ನು ಒದಗಿಸಲಾಗಿದ್ದು, ಈ ಯಂತ್ರದ ಮೂಲಕ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು ಇವರಿಂದ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ ಹಾಗೂ ಮೂಲಸೌಕರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಬೀಚ್ ನಲ್ಲಿ ಜೀವ ರಕ್ಷಕರನ್ನು ಕೂಡಾ ನಿಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಾರವಾರದ ರವೀಂದ್ರ ಠಾಗೋರ್ ಕಡಲತೀರ ಹಾಗೂ ಅಪ್ಸರಕೊಂಡ ಕಡಲತೀರಗಳನ್ನು ಸಹ ಮುಂದಿನ ದಿನಗಳಲ್ಲಿ ಬ್ಲೂ ಫ್ಲಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ತಾಧಿಕಾರಿ ಶಿವಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಸುಧೀರ್ , ಹಿರಿಯ ಪತ್ರಕರ್ತರಾದ ನಾಗರಾಜ ಹರಪನಹಳ್ಳಿ, ದೀಪಕ ಕುಮಾರ್ ಶೆಣೈ, ಬೀಚ್ ನಿರ್ವಹಣೆ ವಿನಯ್, ಲೈಫ್ ಗಾರ್ಡ್ಸ ಇದ್ದರು.
