Mundagod| ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮುಂಡಗೋಡದಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ಆತನಿಂದ 436 ಗ್ರಾಂ ಗಾಂಜಾ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮುಂಡಗೋಡದ ಹಳ್ಳೂರ ಓಣಿಯ ನಿವಾಸಿ ಇಸ್ಮಾಯಿಲ್ ಬಾಬುಸಾಬ ಜಮಖಂಡಿ (40) ಎಂದು ಗುರುತಿಸಲಾಗಿದೆ. ಈತ ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಮುಂಡಗೋಡ–ಯಲ್ಲಾಪುರ ರಾಜ್ಯ ಹೆದ್ದಾರಿ ಸಂಖ್ಯೆ 6ರಲ್ಲಿರುವ ಬ್ಲೂ ಹೀಲ್ ಹೋಟೆಲ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ್ ಎಚ್. ಹನಾಪುರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.
ದಾಳಿಯ ವೇಳೆ ಆರೋಪಿಯ ಬಳಿ ಇದ್ದ 436 ಗ್ರಾಂ ಗಾಂಜಾ, ₹600 ನಗದು ಹಾಗೂ ಕೆಎ-31 ಎಕ್ಸ್-3972 ಸಂಖ್ಯೆಯ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಅಡಿ ಪ್ರಕರಣ ದಾಖಲಾಗಿದೆ.
