Karwar| ತಾಲೂಕಿನ ಹೋಟೆಗಾಳಿ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 180 ಮೆಟ್ರಿಕ್ ಟನ್ ಮರಳನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಆಶಾ ಅವರ ನೇತೃತ್ವದಲ್ಲಿ ರಾತ್ರಿ ವೇಳೆ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಈ ಅಕ್ರಮ ಮರಳು ಪತ್ತೆಯಾಗಿದೆ. ಯಾವುದೇ ಅನುಮತಿ ಇಲ್ಲದೇ ಸಂಗ್ರಹಿಸಲಾಗಿದ್ದ ಈ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳು ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಉಪನಿರ್ದೇಶಕಿ ಆಶಾ ಅವರ ಕಾರ್ಯಾಚರಣೆ, ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆಯು ನಿರಂತರವಾಗಿ ದಾಳಿ ನಡೆಸುತ್ತಿದೆ.
ಈ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಕ್ರಮ ಮರಳು ಸಾಗಣೆ ಹಾಗೂ ಸಂಗ್ರಹಣೆ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
