Karwar| ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ಕ್ಯಾಥೊಲಿಕ್ ಅಸೋಸಿಯೇಶನ್ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಆಗ್ರಹಿಸಿದರು.

ಕಾರವಾರ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವಾನ್ ಡಿಸೋಜಾ ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.

ಕಾನೂನು ತಜ್ಞರಾಗಿರುವ ಐವಾನ್ ಡಿಸೋಜಾ ಅವರು ಹಲವು ದಶಕಗಳ ರಾಜಕೀಯ ಅನುಭವ ಹೊಂದಿದ್ದು, ಜನಸಾಮಾನ್ಯರ ಸಮಸ್ಯೆಗಳ ಕುರಿತು ಸದಾ ಧೈರ್ಯವಾಗಿ ಧ್ವನಿ ಎತ್ತಿದ್ದಾರೆ. ಶಿಕ್ಷಣ, ಆರೋಗ್ಯ, ನಿರುದ್ಯೋಗ ನಿವಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಶಾಸಕರ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ನಿರಂತರ ಹೋರಾಟ ನಡೆಸಿದ್ದಾರೆ ಎಂದು ತಿಳಿಸಿದರು.

ಕಾರವಾರ-ಅಂಕೋಲಾ ಕ್ರಿಶ್ಚಿಯನ್ ಫೊರಂ ಅಧ್ಯಕ್ಷ ಲಿಯೋ ಲ್ಯುಯಿಸ್ ಮಾತನಾಡಿ, ಐವಾನ್ ಡಿಸೋಜಾ ಅವರು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಐವಾನ್ ಡಿಸೋಜಾ ಅವರಂತಹ ಅನುಭವ ಸಂಪನ್ನ ಹಾಗೂ ಹೋರಾಟಗಾರ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಕಾಂಗ್ರೆಸ್ ನಾಯಕತ್ವಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಲಿಯೋ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಯಾಮಸನ್ ಡಿಸೋಜಾ, ಸ್ಟೀಫನ್ ರೊಡ್ರಿಗಸ್ ಇದ್ದರು.