Kumta| ಟಿ-20 ವಿಶ್ವಕಪ್ ಗೆಲುವಿನ ಬಳಿಕ ಭಾರತೀಯ ಕ್ರಿಕೆಟ್ ತಂಡದ ಥ್ರೋ ಡೌನ್ ಸ್ಪೇಷಲಿಸ್ಟ್ ರಾಘವೇಂದ್ರ ದಿವಗಿ ಅವರು ಇಂದು ಮೊದಲ ಬಾರಿಗೆ ತಮ್ಮ ತವರು ಕುಮಟಾಕ್ಕೆ ಆಗಮಿಸಿದರು.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಗ್ರಾಮದವರಾದ ರಾಘವೇಂದ್ರ (ರಾಘು) ಅವರು, ಸ್ವಗ್ರಾಮಕ್ಕೆ ಬಂದ ಬಳಿಕ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ವೀರಾಂಜನೆಯ ಮಹಾ ಸಂಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸಂಸ್ಥಾನದ ಪೀಠಾಧಿಪತಿ ಮಾರುತಿ ಗುರೂಜಿ ಅವರು ರಾಘವೇಂದ್ರ ಅವರಿಗೆ ಆಶೀರ್ವಚನ ನೀಡಿ, ಅವರ ಸಾಧನೆಯನ್ನು ಕೊಂಡಾಡಿದರು. ಜೊತೆಗೆ ಸಂಸ್ಥಾನದ ವತಿಯಿಂದ ರಾಘವೇಂದ್ರ ದಿವಗಿ ಅವರಿಗೆ ಸತ್ಕಾರ ಮಾಡಲಾಯಿತು.
ಟಿ-20 ವಿಶ್ವಕಪ್ ಜಯದ ಸಂತಸದಲ್ಲಿರುವ ರಾಘವೇಂದ್ರ ದಿವಗಿ ಅವರ ಆಗಮನ ಸ್ಥಳೀಯರಲ್ಲಿ ಸಂಭ್ರಮವನ್ನುಂಟುಮಾಡಿದ್ದು, ಅವರ ಸಾಧನೆಗೆ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಮತ್ತು ಅತ್ಯಂತ ಯಶಸ್ವಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿರುವ ರಾಘು, 2011 ರಿಂದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 140-150 km/h ವೇಗದಲ್ಲಿ ಸೈಡ್-ಆರ್ಮ್ ಮೂಲಕ ಚೆಂಡುಗಳನ್ನು ಎಸೆಯುತ್ತಾ ಕೊಹ್ಲಿ, ರೋಹಿತ್ ಸೇರಿದಂತೆ ಸ್ಟಾರ್ ಬ್ಯಾಟರ್‌ಗಳ ಅಭ್ಯಾಸಕ್ಕೆ ನೆರವಾಗುತ್ತಿರುವುದನ್ನು ಸ್ಮರಿಸಬಹುದು.
