Karwar| ಸಾರ್ವಜನಿಕರು ಓಡಾಡುವ ರಸ್ತೆಯ ಜಾಗ ತನ್ನದೆಂದು, ಆ ದಾರಿಗೆ ವ್ಯಕ್ತಿಯೊಬ್ಬ ಕಂಪೌಂಡ್ ಹಾಕಿದ ಘಟನೆ ತಾಲೂಕಿನ ಚೆಂಡಿಯಾದಲ್ಲಿ‌ ನಡೆದಿದೆ.

ಚೆಂಡಿಯಾ ಗ್ರಾಮದ ರುಕ್ಕಾಂಗದ ನಾಯ್ಕ‌ ಎಂಬುವವರೇ ಸಾರ್ವಜನಿಕರು ಓಡಾಡುವ ರಸ್ತೆಗೆ ಕಂಪೌಂಡ್ ಹಾಕಿದ ಭೂಪ. ಚೆಂಡಿಯಾ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸದರಿ ಐಸ್ ಫ್ಯಾಕ್ಟರಿ ರವರೆಗೆ ಅನಾಧಿಕಾಲದಿಂದ ಇದ್ದ ರಸ್ತೆಯು ಕಾಲಕಾಲಕ್ಕೆ ಸುಧಾರಣೆಗೊಂಡು ಕಾಂಕ್ರೀಟ್ ರಸ್ತೆಯಾಗಿ ಮಾರ್ಪಾಡಾಗಿತ್ತು. ಆದರೆ ಇತ್ತೀಚಿಗೆ ಏಕಾಏಕಿ ಗ್ರಾಮದ ರುಕ್ಕಾಂಗದ ನಾಯ್ಕ, ಈ ರಸ್ತೆಗೆ ಅಡ್ಡವಾಗಿ ಒಂದು ತಡೆಗೋಡೆಯನ್ನು ನಿರ್ಮಿಸಿ, ಸಾರ್ವಜನಿಕರ‌ ಓಡಾಟಕ್ಕೆ ತೊಂದರೆ ಮಾಡಿದ್ದರು.

ಈ ಬಗ್ಗೆ ಚೆಂಡಿಯಾ ಗ್ರಾಮಸ್ಥರು ಕಂಪೌಂಡ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಚೆಂಡಿಯಾ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ಪ್ರಶಾಂತ್ ಎಚ್.ಎಸ್. ಅವರ ನೇತೃತ್ವದಲ್ಲಿ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಹಕಾರದೊಂದಿಗೆ ರಸ್ತೆಗೆ ಅಡ್ಡವಾಗಿ ಕಟ್ಟಿರುವ ಸದರಿ ತಡೆಗೋಡೆಯನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದರು.