ಕಾರವಾರ: ದೆಹಲಿಯಲ್ಲಿ ನಡೆಯುತ್ತಿರುವ AI ಶೃಂಗಸಭೆಯ‌ ಬಗ್ಗೆ ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಬ್ರಾಡ್ ಸ್ಮಿತ್ ನಂಥ ವಿದೇಶಿ ದಿಗ್ಗಜರು ನಮ್ಮ ದೇಶದ ತಾಂತ್ರಿಕ ಕಸುವನ್ನು ಕಂಡು ಬೆರಗಾಗಿರುವಾಗ, ನಮ್ಮ ಮನೆಯೊಳಗಿನ ವಿರೋಧಿಗಳಾದ ಕಾಂಗ್ರೆಸ್ಸಿಗರು ಈ ಶೃಂಗಸಭೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ಅತ್ಯಂತ ಲಜ್ಜೆಗೆಟ್ಟ ಮತ್ತು ಅಸಹ್ಯಕರವಾದ ಕೆಲಸ ಎಂದು‌ ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.

ಈ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಾಗೇರಿ, ಇಡೀ ಜಗತ್ತೇ ಇವತ್ತು ಭಾರತದತ್ತ ಮುಖ ಮಾಡಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದಿವ್ಯ ನೇತೃತ್ವದಲ್ಲಿ ಭಾರತವು ಜಾಗತಿಕ ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯನ್ನು ಆಯೋಜಿಸುವ ಮೂಲಕ ತಾಂತ್ರಿಕ ಲೋಕದ ಅಧಿಪತಿಯಾಗಿ ವಿಜೃಂಭಿಸುತ್ತಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತವನ್ನು ಜಾಗತಿಕ ವೇದಿಕೆಯ ‘ಕೇಂದ್ರ ಬಿಂದು’ ಎಂದು ಬಣ್ಣಿಸಿದರೆ, ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಭಾರತವನ್ನು ‘ಗ್ಲೋಬಲ್ ಸೌತ್’ ಅಂದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಗಟ್ಟಿಯಾದ ಧ್ವನಿ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

​ವಿಶ್ವದ ಮೂಲೆಮೂಲೆಯಿಂದ ನಾಯಕರು ಬಂದು ಭಾರತದ ಪ್ರಗತಿಯನ್ನು ಕೊಂಡಾಡುತ್ತಿದ್ದರೆ, ಇಲ್ಲಿನ ಕಾಂಗ್ರೆಸ್ ಮಂದಿ ಮಾತ್ರ ಹೊಟ್ಟೆಕಿಚ್ಚಿನಿಂದ ದೇಶದ ಇಮೇಜನ್ನು ಕೆಡಿಸಲು ಹವಣಿಸುತ್ತಿದ್ದಾರೆ. ಇದು ನೇರವಾದ ‘ದೇಶದ್ರೋಹವಲ್ಲದೆ ಮತ್ತೇನೂ ಅಲ್ಲ ಎಂದು ಕಾಂಗ್ರೆಸ್ ಬಗ್ಗೆ ಕಿಡಿಕಾರಿದ್ದಾರೆ.

ವಿದೇಶದ ನೆಲದಲ್ಲಿ ನಿಂತು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ರಾಹುಲ್ ಗಾಂಧಿ ಅವರ ಈ ‘ಮತಿಹೀನ’ ಹಾಗೂ ‘ರಾಷ್ಟ್ರಪ್ರೇಮವಿಲ್ಲದ’ ವರ್ತನೆಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಅಂದು ಜವಾಹರಲಾಲ್ ನೆಹರೂ ಅವರು ಭಾರತವನ್ನು ‘ಹಾವು ಆಡಿಸುವವರ ದೇಶ’ ಎಂದು ಹೀಯಾಳಿಸಿದ್ದರು, ಇಂದು ಅವರ ಮೊಮ್ಮಗ ರಾಹುಲ್ ಗಾಂಧಿ ಅವರು ನಮ್ಮ ಯುವಕರು ಕಟ್ಟಿದ ಎಐ ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಅವಮಾನಿಸುವ ಮೂಲಕ ಅದೇ ಹಳೆಯ ಅಹಂಕಾರದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಇವರಿಗೆ ದೇಶದ ಹಿತಾಸಕ್ತಿಗಿಂತ ಗಾಂಧಿ ಪರಿವಾರದ ಆ ಅಹಂಕಾರದ ‘ವಂಶಪಾರಂಪರ್ಯ ಹಕ್ಕಿನ’ ಮನಸ್ಥಿತಿಯೇ ದೊಡ್ಡದಾಗಿದೆ ಎಂದು ಜರಿದಿದ್ದಾರೆ.

​ಸರ್ಜಿಕಲ್ ಸ್ಟ್ರೈಕ್ ನಡೆದಾಗ ನಮ್ಮ ಸೈನಿಕರ ಶೌರ್ಯಕ್ಕೆ ಸಾಕ್ಷಿ ಕೇಳಿದ ಈ ಮಂದಿ, ಇವತ್ತು ತಾಂತ್ರಿಕ ಕ್ರಾಂತಿಯನ್ನೂ ಸಂಶಯದ ಕಣ್ಣಿನಿಂದ ನೋಡುತ್ತಿದ್ದಾರೆ. 2008ರಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ರಹಸ್ಯವಾಗಿ ಒಪ್ಪಂದ ಮಾಡಿಕೊಂಡ ಕಾಂಗ್ರೆಸ್ಸಿಗರಿಗೆ ಭಾರತದ ಏಳಿಗೆಯನ್ನು ಕಂಡರೆ ಆತಂಕವಾಗುತ್ತಿದೆ. ಚುನಾವಣಾ ಆಯೋಗ ಮತ್ತು ನ್ಯಾಯಾಂಗದಂತಹ ಪವಿತ್ರ ಸಂಸ್ಥೆಗಳ ಮೇಲೆ ಸದಾ ಸವಾರಿ ಮಾಡುವ ಇವರು, ಸತ್ಯವನ್ನು ಬಿತ್ತರಿಸುವ ಮಾಧ್ಯಮಗಳನ್ನೂ ಬಿಡದೆ ಹೀಯಾಳಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತವನ್ನು ವಿಶ್ವದ ‘ಎಐ ಟ್ಯಾಲೆಂಟ್ ಹಬ್’ ಮಾಡಲು ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ’ದ ಸಂಕಲ್ಪ ಮಾಡಿದ್ದರೆ, ಕಾಂಗ್ರೆಸ್ ಮಾತ್ರ ಪಾಕಿಸ್ತಾನದ ಗುಣಗಾನ ಮಾಡುತ್ತಾ ಕಾಲ ಕಳೆಯುತ್ತಿದೆ. ಕಾಂಗ್ರೆಸ್‌ನ ಇಂತಹ ಅಡೆತಡೆಗಳೇನೇ ಇದ್ದರೂ, ಭಾರತವು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ‘ವಿಶ್ವಗುರು’ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಕಾಗೇರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.