ಅಂಕೋಲಾದ ಗಂಗಾವಳಿ ನದಿಗೆ ಕಟ್ಟಲಾದ ಸೇತುವೆ ಉದ್ಘಾಟನೆಯ ವೇಳೆ‌ ಸಿ.ಎಂ ಸಿದ್ದರಾಮಯ್ಯ, ದಿನಕರ ಶೆಟ್ರೆ ನೀವು ಕಾಂಗ್ರೆಸ್ ಗೆ ಬರಬೇಡಿ, ನಿಮ್ಮನ್ನ ಕರೆಯೊದೂ ಇಲ್ಲ ಸೇರಿಸಿಕೊಳ್ಳೊದೂ ಇಲ್ಲ ಅಂಥ ಹೇಳಿ ಶೆಟ್ರಿಗೆ ಕಸಿವಿಸಿ ಮಾಡಿದ್ದರು.

ಈ ಬಗ್ಗೆ ವಿಡಿಯೋ ಸಹಿತ www.news waves Kannada.com ಮೊದಲು‌ ಸುದ್ದಿ ಮಾಡಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡಿತ್ತು. ಅಲ್ಲದೇ ಇದು ಬಿಜೆಪಿಯೊಳಗೆ ಹಾಗೂ ಕಾರ್ಯಕರ್ತರ ವಲಯದಲ್ಲಿ ಸಾಕಷ್ಟು ಸದ್ದು ಸಹ ಮಾಡಿತ್ತು.‌‌

ಪಕ್ಷದಲ್ಲಿರುವ ಶೆಟ್ಟಿಯವರ ವಿರೋದಿಗಳು ಇದನ್ನೆ ಅಸ್ತ್ರವನ್ನಾಗಿ ಮಾಡಿಕೊಂಡು, ಶೆಟ್ಟಿಯವರು ಪಕ್ಷ ಬಿಡೋ ಪ್ಲ್ಯಾನ್ ನಲ್ಲಿದ್ದಾರೆ ಎಂದೆಲ್ಲಾ ಹುಯಿಲು ಎಬ್ಬಿಸಿ, ಪಕ್ಷದೊಳಗೆ ದಿನಕರ ಶೆಟ್ಟಿಯವರಿಗೆ ಮುಜುಗರ ಸೃಷ್ಟಿಸಿದ್ದರು.

ಈ ಬಿಕ್ಕಟ್ಟಿನಿಂದ ಹೊರಬರಲು ದಿನಕರ ಶೆಟ್ಟಿಯವರು ಇಂದು ಸಿಎಂ‌ ಸಿದ್ದರಾಮಯ್ಯ ನವರಿಗೆ ‘ಕೌಂಟರ್’ ಮಾಡಿ ಮಾತನಾಡುತ್ತಾ, ಸಿಎಂ‌ ಹಾಗೂ ಡಿಸಿಎಂ ನಡುವೆ ಅಧಿಕಾರ ಹಂಚಿಕೆಯಾಗಿದೆಯಂತೆ, ಹೈಕಮಾಂಡ್ ಮಟ್ಟದಲ್ಲಿ. ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಶ್ರಮ ಕೂಡಾ ಇದೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಸಿಎಂ ಕುರ್ಚಿ ಡಿಕೆಶಿಗೆ ಬಿಟ್ಟು ಕೊಡಬೇಕು ಎಂದು ತಾವೂ ಕೂಡಾ ಸಿದ್ದರಾಮಯ್ಯಗೆ ಸಣ್ಣದಾಗಿ ಕಾಲೆಳೆದಿದ್ದಾರೆ.

ಬಹಳ ಎಚ್ಚರಿಕೆಯಿಂದ ಮಾತನಾಡಿರುವ ಶಾಸಕ ಶೆಟ್ಟಿಯವರು, ನಾಳೆ ಕಾಂಗ್ರೆಸ್‌ ಕಾರ್ಯಕರ್ತರು ಸಿಎಂ ಅವರಿಗೆ ಟೀಕಿಸುವ ಅರ್ಹತೆ ನಿಮಗಿದೆಯಾ ಎಂದು ಕೇಳಬಹುದು ಎಂಬ ಲೆಕ್ಕಾಚಾರ ಹಾಕಿ, ಸಿಎಂ ಬಗ್ಗೆ ಬಹಳ ಮಾತನಾಡಿದರೆ, ಆ ಪಕ್ಷದ ಪುಡಾರಿಗಳು ಒದರಾಡುತ್ತಾರೆ. ನಾನೇನು ಸಿದ್ದರಾಮಯ್ಯ ನವರಿಗೆ ಕಡಿಮೆ ಇಲ್ಲ, ತಾನೂ ಶಾಸಕನಾಗಿದ್ದೇನೆ. ಅವರೂ ಸಿದ್ದರಾಮಯ್ಯ ನವರೂ ಕೂಡಾ ಶಾಸಕರೇ. ನಂತರ ಸಿಎಂ ಎಂದು ತಮ್ಮ‌ ಮಾತಿಗೆ‌ ತಾವೇ ಸಮರ್ಥನೆ ನೀಡುವ ಯತ್ನ ಮಾಡಿದ್ದಾರೆ.

ಅಲ್ಲದೇ,ನಾನೇನು ಕಾಂಗ್ರೆಸ್ ಪಕ್ಷ ಸೇರುವ ಇಂಗಿತ ವ್ಯಕ್ತ ಪಡಿಸಿಲ್ಲ. ಅಂಕೋಲಾ ಸಭೆ ಪ್ರಾರಂಭಕ್ಕೂ ಮುನ್ನ ಹೆಬ್ಬಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರೂ ಕಾಂಗ್ರೆಸ್ ನವರೇ ಇದ್ದಾರೆ ನಿಮ್ಮನ್ನ ಬಿಟ್ಟು, ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದು ಉಳಿದ ಶಾಸಕರು ಮಾತನಾಡಿದ್ದರು. ಕೂಡಲೇ ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿದೆ. ನನಗೆ ವಿರೋಧ ಪಕ್ಷದಲ್ಲಿದ್ದೂ ಅನುದಾನ ತರುವ ಶಕ್ತಿಯಿದೆ. ಅನುದಾನಕ್ಕಾಗಿ ಇತರರಂತೆ ಪಕ್ಷ ಬದಲಿಸುವ ವ್ಯಕ್ತಿ ಅಲ್ಲ ಅಂದು ಹೇಳಿದ್ದೆ. ಈ ಮುಜುಗರವನ್ನು ತಪ್ಪಿಸಲು ಸಿಎಂ ನನಗೆ ಮುಜುಗರ ಉಂಟಾಗುವಂತೆ ಮಾತನಾಡಿದರು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಒಟ್ಟಾರೆ ಶೆಟ್ರ್ ಸ್ಪಿನ್ ಗಿಂತ ಸಿಎಂ ಸಿದ್ದರಾಮಯ್ಯ ನಿನ್ನೆ ಸೇತುವೆ ಉದ್ಘಾಟನೆಯ ವೇಳೆ ಎಸೆದ ‘ಗೂಗ್ಲಿ’ ಮಾತ್ರ ಜಿಲ್ಲೆಯ ರಾಜಕಾರಣದಲ್ಲಿ‌ ಸಾಕಷ್ಟು ಸದ್ದು ಮಾಡಿರುವುದಂತೂ ಸುಳ್ಳಲ್ಲ.