ಕಾರವಾರ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳು ಸಮೀಪಿಸಿದರೂ ಜಿಲ್ಲೆಗೆ, ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಯಾವುದೆ ಗಣನೀಯ ಕೊಡುಗೆ ನೀಡದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿ ಉದ್ಘಾಟನೆ ನೆರವೇರಿಸುವುದಷ್ಟೇ ಕಾಂಗ್ರೆಸ್ ಸರ್ಕಾರ ಸೀಮಿತವಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇನ್ನಾದರೂ ಈ ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಬೇಕು ಎಂದು ಒತ್ತಾಯಿಸಿರುವ ಅವರು, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಜಿಲ್ಲೆಗೆ ಆಗಮಿಸುತ್ತಿರುವುದು ಸ್ವಾಗತಾರ್ಹ. ಹಾಗೆಯೇ ಜಿಲ್ಲೆ ಹಾಗೂ ಕಾರವಾರ ಅಂಕೋಲಾ ಕ್ಷೇತ್ರಕ್ಕೆ ಅಭಿವೃದ್ಧಿಯ ಕೊಡುಗೆ ನೀಡುವಂತಾಗಲಿ. ಕಳೆದ ಮೂರು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು, ಯಾವ ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದೀರಿ ಎಂದು ಬಹಿರಂಗವಾಗಿ ತಿಳಿಸಬೇಕು ಎಂದು ರೂಪಾಲಿ ಸವಾಲು ಹಾಕಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಮ್ಮತಿಸಿತ್ತು. ಅದೇ ಸಂದರ್ಭದಲ್ಲಿ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿತ್ತು. ಬಜೆಟ್ ನಲ್ಲೂ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆದ್ಯತೆಯಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕಿತ್ತು. ತಜ್ಞ ವೈದ್ಯರುಗಳನ್ನು ನೇಮಕ ಮಾಡಿ ಹೃದಯರೋಗ, ನರರೋಗ ಮತ್ತಿತರ ಗಂಭೀರ ಕಾಯಿಲೆಗಳಿಗೆ ಇಲ್ಲೇ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕಿತ್ತು. ಈ ಮೂರು ವರ್ಷಗಳ ಕಾಲ ಜಿಲ್ಲೆಯ ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟ ಆಡುತ್ತ ಕಾಲಹರಣ ಮಾಡಿದ್ದಕ್ಕಾಗಿ ಬೇಷರತ್ತಾಗಿ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಹಾಗೂ ಕೂಡಲೇ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಮಾಜಿ ಶಾಸಕಿ ರೂಪಾಲಿ ಆಗ್ರಹಿಸಿದ್ದಾರೆ.

ಹಿಂದೆ ತಾನು ಶಾಸಕಳಾಗಿದ್ದಾಗ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ 160 ಕೋಟಿ ರೂ. ಬಿಡುಗಡೆಯಾಗಿತ್ತು. ನಂತರ ಆಸ್ಪತ್ರೆಯ ಕಾಮಗಾರಿಯೂ ಆರಂಭವಾಗಿ ಈಗ ಪೂರ್ಣಗೊಂಡಿದೆ. ನ್ಯೂರೋ ಸರ್ಜನ್, ಕಾರ್ಡಿಯಾಲಾಜಿಸ್ಟ್ ಸೇರಿದಂತೆ ಏಳು ತಜ್ಞ ವೈದ್ಯರ ಹುದ್ದೆಯನ್ನೂ ಬಿಜೆಪಿ ಸರ್ಕಾರ ಮಂಜೂರು ಮಾಡಿತ್ತು. ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು. ಎಂಆರ್ ಐ ಮಶೀನ್ ಕೂಡ ಅಂದಿನ ಸರ್ಕಾರ ಮಂಜೂರು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ಸಂಸದರಾದ ಅನಂತಕುಮಾರ ಹೆಗಡೆ ನೆರವಿನಿಂದ 16 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಕೂಡ ಮಂಜೂರಾಗಿ ಕಟ್ಟಡ ನಿರ್ಮಾಣಕಾರ್ಯ ಮುಗಿದಿದೆ. ಹೀಗಿದ್ದರೂ ಈಗಿನ ಕಾಂಗ್ರೆಸ್ ಸರ್ಕಾರ ಏಕೆ ಕಾಲಹರಣ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ.

ಇಲ್ಲಿನ ಜನತೆಯ ಆರೋಗ್ಯ ತಪಾಸಣೆಗೆ ಅತ್ಯಗತ್ಯವಾದ ಎಂಆರ್ ಐ ಮಶೀನ್ ಇಲ್ಲ. ಎಂಆರ್ ಐ ಪರೀಕ್ಷೆಗೆ ಜನತೆ 200-250 ಕಿ.ಮೀ.ದೂರ ಹೋಗಬೇಕಾಗಿದೆ. ಎಂಆರ್ ಐ ಮಶೀನ್ ಅಳವಡಿಕೆಗೆ ಟೆಂಡರ್ ಆಗಿದೆ ಎಂದು ಹೇಳುತ್ತಿದ್ದರೂ ಇದುವರೆಗೆ ಏಕೆ ಅಳವಡಿಕೆಯಾಗಿಲ್ಲ. ಎಲ್ಲ ರೋಗಿಗಳಿಗೆ ಸಿಟಿ ಸ್ಕ್ಯಾನ್ ಸಹ ಮಾಡುತ್ತಿಲ್ಲ. ಹೃದ್ರೋಗ ತಜ್ಞರು, ನರ ರೋಗ ತಜ್ಞರು ಹೀಗೆ ತಜ್ಞ ವೈದ್ಯರು ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದೇ ಒಂದು ಉಪಕರಣ, ತಜ್ಞ ವೈದ್ಯರನ್ನು ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಿಗೈಯಲ್ಲಿ ಉದ್ಘಾಟನೆ ಮಾಡಲು ಬಂದಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗೆ ಸೂಕ್ತ ಉದಾಹರಣೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಹಿಂದಿನ ಸರ್ಕಾರ ರೂಪಿಸಿದ ಯೋಜನೆಯನ್ನು ಈಗಿನ ಸರ್ಕಾರ ಉದ್ಘಾಟಿಸುವುದು ಸಹಜ. ಆದರೆ ಯಾವುದೇ ಸೌಲಭ್ಯ ಕಲ್ಪಿಸದೆ, ಯಾವುದೇ ಕೊಡುಗೆ ನೀಡದೆ ಕಟ್ಟಡ ಉದ್ಘಾಟಿಸುವುದು ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.