Karwar| ರಾಜ್ಯ ಸರ್ಕಾರದ ಅತಿರೇಕದ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣದಿಂದಲೇ ಸಮಾಜಘಾತುಕ ಶಕ್ತಿಗಳು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಮೂರಿನಕಟ್ಟೆಯನ್ನು ಧ್ವಂಸಗೊಳಿಸಿ, ಧಾರ್ಮಿಕ ದೌರ್ಜನ್ಯ ನಡೆಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಭಟ್ಕಳದ ವೆಂಕಟಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ, ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ‘ಮೂರಿನಕಟ್ಟೆ’ಯನ್ನು ಭಾನುವಾರ ತಡರಾತ್ರಿ ಸಮಾಜಘಾತಕ ಶಕ್ತಿಗಳು ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಧ್ವಂಸಗೊಳಿಸಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಗಿ ಸಮುದ್ರದಲ್ಲಿ ದುರಂತ ಸಾವಿಗೀಡಾದ ಬಡ ಜನರ ಶೋಕಾಚರಣೆಯ ಪರಿಸ್ಥಿತಿಯಲ್ಲೇ ತಡರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಕಿಡಿಗೇಡಿಗಳು ಈ ಧ್ವಂಸ ಕೃತ್ಯ ಎಸಗಿರುವುದು ಅವರ ಕೋಮು ದ್ವೇಷಕ್ಕೆ ಸಾಕ್ಷಿಯಾಗಿದೆ. ಸತ್ತವರ ಶೋಕದ ನಡುವೆಯೂ ಇಂತಹ ಕೃತ್ಯಕ್ಕೆ ಸಂಚು ರೂಪಿಸಿದ ಇವರ ಧಾರ್ಮಿಕ ಅಸಹಿಷ್ಣುತೆಯನ್ನು ತೀವ್ರ ಪದಗಳಲ್ಲಿ ಖಂಡಿಸಲೇಬೇಕಾಗಿದೆ. ಮುಖ್ಯವಾಗಿ, ಈ ಮೂರಿನಕಟ್ಟೆ ಸ್ಥಳವು ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧಪಡದ ವಿಷಯ. ಇದು ಕೇವಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹಿಂದೂ ಸಮಾಜದ ನಡುವಿನ ಒಪ್ಪಂದದ ಅನ್ವಯ ನಿರ್ಮಾಣಗೊಂಡ ಹಿಂದೂಗಳ ಧಾರ್ಮಿಕ ಭಾಗವಾಗಿತ್ತು. ಇದು ಮುಸ್ಲಿಮರಿಗೆ ಸೇರಿದ ಜಾಗವೂ ಅಲ್ಲ, ಅವರಿಗೆ ಸಂಬಂಧಿಸಿದ ವಿಷಯವೂ ಆಗಿರಲಿಲ್ಲ. ಹೀಗಿದ್ದೂ, ಕೇವಲ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಕೆಡಿಸಿ, ಗಲಭೆ ಸೃಷ್ಟಿಸುವ ಏಕೈಕ ದುರುದ್ದೇಶದಿಂದಲೇ ಈ ಧ್ವಂಸ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ, ಹಿಂದೂಗಳು ತಮ್ಮ ಧಾರ್ಮಿಕ ಭಾವನೆಯನ್ನು ಬದಿಗಿಟ್ಟು ದೇಶದ ಅಭಿವೃದ್ಧಿ ಕಾರ್ಯಗಳಿಗಾಗಿ ಹಳೆಯ ಕಟ್ಟೆಯನ್ನು ಬಿಟ್ಟುಕೊಟ್ಟಿದ್ದರು. ಈ ನೂತನ ಕಟ್ಟೆಯಿಂದ ಯಾರಿಗೂ, ಯಾವುದೇ ರೀತಿಯ ತೊಂದರೆ ಇರಲಿಲ್ಲ. ಯಾವುದೇ ಕಾನೂನಾತ್ಮಕ ಆಕ್ಷೇಪಣೆಗಳಿದ್ದರೂ ಸಂಬಂಧಪಟ್ಟ ಮುಖಂಡರು ಅಧಿಕಾರಿಗಳ ಬಳಿ ಶಾಂತಿಯುತವಾಗಿ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು, ಕಾನೂನನ್ನು ಸಂಪೂರ್ಣವಾಗಿ ಕೈಗೆತ್ತಿಕೊಂಡು, ಗೂಂಡಾವರ್ತನೆಯ ಮೂಲಕ ಹಿಂದೂಗಳ ಅಸ್ಮಿತೆಯಂತಿದ್ದ ಪವಿತ್ರ ಕಟ್ಟೆಯನ್ನು ಒಡೆದು ಹಾಕಿರುವದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಸಮಾಜಘಾತಕ ಗೂಂಡಾಗಿರಿಯನ್ನು ಹಿಂದೂ ಸಮಾಜವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಾಗೇರಿ ಎಚ್ಚರಿಸಿದ್ದಾರೆ.
ಕ್ಷೇತ್ರದಲ್ಲಿ ಇಂದು ಹಿಂದೂ ಕಾರ್ಯಕರ್ತರಿಗಾಗಲಿ ಅಥವಾ ಕರ್ತವ್ಯನಿರತ ಪೊಲೀಸರಿಗಾಗಲಿ ರಕ್ಷಣೆ ಇಲ್ಲದಂತಹ ಅರಾಜಕತೆ ಸೃಷ್ಟಿಯಾಗಿದೆ. ಸ್ಥಳೀಯ ಶಾಸಕರು ಮತ್ತು ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಧಾರ್ಮಿಕ ದೌರ್ಜನ್ಯ ನಡೆದಿರುವುದು ಅವರ ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹಿಂದೂಗಳನ್ನು ಮಟ್ಟ ಹಾಕಿ, ಕೇವಲ ಒಂದು ವರ್ಗದ ಮತಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವ ಇವರ ಪ್ರಭಾವ ಹಾಗೂ ಕುಮ್ಮಕ್ಕಿನಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಟೀಕಿಸಿದ್ದಾರೆ.
ಹಿಂದೂಗಳ ಶಾಂತಿ ಮತ್ತು ತಾಳ್ಮೆಯನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬಾರದು. ಧ್ವಂಸಗೊಂಡಿರುವ ಪವಿತ್ರ ಕಟ್ಟೆಯನ್ನು ತಕ್ಷಣವೇ ಯಥಾಸ್ಥಿತಿಯಲ್ಲಿ ಅದೇ ಜಾಗದಲ್ಲಿ ಮರುಸ್ಥಾಪಿಸಬೇಕು. ಕಾನೂನು ಕೈಗೆತ್ತಿಕೊಂಡು ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿದ ಪ್ರತಿಯೊಬ್ಬ ಕಿಡಿಗೇಡಿಯನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ಹಿಂದೂ ಸಮಾಜ ಒಗ್ಗೂಡಿ ಉಗ್ರ ಹೋರಾಟ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಂಸದ ಕಾಗೇರಿ ಎಚ್ಚರಿಸಿದ್ದಾರೆ.
