ಕಾರವಾರ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಕಾರವಾರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳಿಗೆ ಕೇಂದ್ರ ಸರ್ಕಾರ ನೈತಿಕ ಹೊಣೆ ಹೊತ್ತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಟ್ರಸ್ಟ್‌ನ ಇಬ್ಬರು ಸದಸ್ಯರು ರಾಜೀನಾಮೆ ನೀಡಿರುವುದು ಹಾಗೂ ಎಂಟು ಮಂದಿಯನ್ನು ಬಂಧಿಸಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಸೇರಿದಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳು ಟ್ರಸ್ಟ್‌ನೊಂದಿಗೆ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉಗ್ರಪ್ಪ ಆರೋಪಿಸಿದರು. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಅಯೋಧ್ಯೆ ರಾಮನ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯಾಗಲಿ ಸಂಘಪರಿವಾರದ ಪ್ರಮುಖರು ಬಾಯ್ಬಿಡದ ಬಗ್ಗೆ ಆಕ್ಷೇಪಿಸಿದ ಉಗ್ರಪ್ಪ, ಕೇವಲ ಹುಂಡಿ ಹಣ ಲೆಕ್ಕ ಮಾಡುವ ಎಂಟು ಜನರ ಮೇಲೆ ಮಾತ್ರ ಬಂಧಿಸಿ ತನಿಖೆ ಮಾಡಲಾಗುತ್ತಿದೆ. ರಾಜೀನಾಮೆ ನೀಡಿದ ಚಂಪತ್ ರಾಯ್, ಮಿಶ್ರಾ ಇಬ್ಬರ ಮೇಲೆ ಇನ್ನು ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಶ್ರೀರಾಮನ ಹೆಸರನ್ನು ಬಳಸಿಕೊಂಡಿವೆ ಎಂದು ಆರೋಪಿಸಿದ ಅವರು, ರಾಮಾಯಣವು ಭ್ರಷ್ಟಾಚಾರದ ವಿರುದ್ಧ ಸಂದೇಶ ನೀಡುತ್ತದೆ. ಆದರೆ ರಾಮನ ಹೆಸರಿನಲ್ಲೇ ದೇವಸ್ಥಾನಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವುದು ಅತ್ಯಂತ ಗಂಭೀರ ವಿಷಯ ಎಂದು ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘ ಪರಿವಾರದ ಪ್ರಮುಖರು ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಪ್ರಶ್ನಿಸಿದ ಉಗ್ರಪ್ಪ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೈತಿಕ ಹೊಣೆಗಾರಿಕೆಯ ಉದಾಹರಣೆಯನ್ನು ಉಲ್ಲೇಖಿಸಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಮಲಲ್ಲಾ ಪೂಜೆಗೆ ಅವಕಾಶ ಕಲ್ಪಿಸಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಎಂದಿಗೂ ಬಳಸಿಕೊಂಡಿಲ್ಲ. ಆದರೆ ರಾಮನನ್ನು ಬಿಜೆಪಿ, ಸಂಘಪರಿವಾರ ಹೈಜ್ಯಾಕ್ ಮಾಡಿದೆ ಎಂದು ಆರೋಪಿಸಿದರು.
ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳದೆ ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು. ಪ್ರಧಾನಿ ದೇಶದ ಪ್ರಧಾನಿಯಾಗಿ ನಡೆದುಕೊಳ್ಳಬೇಕು, ರಾಜಕೀಯ ಪ್ರಚಾರಕರಂತೆ ವರ್ತಿಸಬಾರದು ಎಂದು ಅವರು ಟೀಕಿಸಿದರು.
ಅಯೋಧ್ಯೆ ಹುಂಡಿ ಕಳವು ಪ್ರಕರಣ ಹೊರಬಂದಿದ್ದು, ಸಂಘಪರಿವಾರದ ಅಕ್ರಮ ಹೊರಜಗತ್ತಿಗೆ ಅನಾವರಣವಾಗಿದೆ. ಈ ಕಾರಣದಿಂದಲೇ ಅರ್.ಎಸ್.ಎಸ್ ನೊಂದಣಿ ಬಗ್ಗೆ ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂದು ಸಮರ್ಥನೆ ನೀಡಿದ ಉಗ್ರಪ್ಪ, ಗುರು ದಕ್ಷಿಣೆ ಮೂಲಕ ಸಂಗ್ರಹವಾಗುವ ಲಕ್ಷಾಂತರ, ಕೋಟ್ಯಾಂತರ ಹಣದ ಮೂಲ, ಬಳಕೆ ಜನರಿಗೆ ತಿಳಿಯಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟಕರ್, ಬಾಬು ಶೇಖ್ ಸೇರಿದಂತೆ ಹಲವರು ಇದ್ದರು.
