ಮನೆಯಿಂದ ನಾಪತ್ತೆಯಾಗಿದ್ದ ಬಾಲಕನಿಗಾಗಿ ಸುಮಾರು ಐದು ಗಂಟೆಗಳ ಕಾಲ ಹುಡುಕಾಡಿ ಕೊನೆಗೆ ಬಾಲಕ ತನ್ನದೇ ಮನೆಯ ಮೊದಲ ಮಹಡಿಯ ಮೆಟ್ಟಿಲಿನ ಹಿಂಭಾಗ ನಿದ್ದೆ ಮಾಡೋ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿ ಲಮಾಣಿ ಚಾಳದ ಬಾಲಕ 4 ವರ್ಷದ ಅಜಾನ್ ಮಹ್ಮದ್ ಯಾಸಿನ್ ಹೆಬ್ಬಳಿ ಇಂದು ಬೆಳಿಗ್ಗೆಯಿಂದ ನಾಪತ್ತೆಯಾಗಿರೋದು ನಾಲ್ವೆಡೆ ಸುದ್ದಿಯಾಗಿತ್ತು. ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೋದ ಬಾಲಕ ಕಾಣುತ್ತಿಲ್ಲ ಎಂದು ಪೋಷಕರು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ನಾಲ್ವೆಡೆ ಪೊಲೀಸ್ ಚೆಕ್‌ಪೋಸ್ಟ್
ಬಾಲಕನ ಬಗ್ಗೆ ಮಾಹಿತಿ ಸಿಕ್ಕರೆ ಸ್ಥಳೀಯ ಪೊಲೀಸ್ ಠಾಣೆಗೂ ತಿಳಿಸುವಂತೆ ಹೇಳಲಾಗಿತ್ತು. ಅಲ್ಲದೇ, ಬಾಲಕನ ಪತ್ತೆಗಾಗಿ ಹಳಿಯಾಳ, ಜೊಯಿಡಾ ಪೋಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ದಾಂಡೇಲಿ ನಗರದ ಅನೇಕ ಕಡೆ ಚೆಕ್ ಪೋಸ್ಟ್ ಗಳಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಮಸೀದಿಯಲ್ಲಿ ಕೂಡಾ ಘೋಷಣೆ ಮಾಡಿದ್ದರಿಂದ ಓಣಿಯ ತುಂಬೆಲ್ಲಾ ಸುದ್ದಿ ಹರಡಿ ಜನರು ಕೂಡಾ ಜಮಾಯಿಸಿದ್ದರು.
5 ಗಂಟೆಯ ಬಳಿಕ ಬಾಲಕ ಪತ್ತೆ
ಪೋಷಕರು, ಊರಿನ ಜನರು, ಪೊಲೀಸರು ಸತತ ಐದು ಗಂಟೆಗಳ ಹುಡುಕಾಟದ ನಂತರ ಬಾಲಕ ಅಜಾನ್ ಸಿಕ್ಕಿದ್ದಾನೆ. ನಗರದಾದ್ಯಂತ ಕಾಣೆಯಾದ ಸುದ್ದಿಯಾಗಿದ್ದ ಬಾಲಕ ತನ್ನದೇ ಮನೆಯ ಮೊದಲ ಮಹಡಿಯ ಮೆಟ್ಟಿಲಿನ ಹಿಂಭಾಗ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಯಾರೋ ಮನೆಯನ್ನು ಮತ್ತೆ ಶೋಧಿಸಿದಾಗ ಮಗು ಮೆಟ್ಟಿಲಿನಲ್ಲಿ ಹಿಂಭಾಗ ಸಿಕ್ಕಿದ್ದು, ಬಾಲಕವನ್ನು ಕಾಣದೇ ಕಣ್ಣೀರು ಹಾಕ್ತಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಔಷಧಿ ಬೇಡವೆಂದು ತೆರಳಿದ್ದ ಬಾಲಕ
ಅಂದಹಾಗೆ, ಬಾಲಕನಿಗೆ ಹುಷಾರಿಲ್ಲದ ಕಾರಣ ತಾಯಿ ಔಷಧಿ ಕುಡಿಸುವ ವೇಳೆ ತನಗೆ ಬೇಡವೆಂದು ಪಕ್ಕದ ಸಂಬಂಧಿಕರ ಮನೆಗೆ ತೆರಳಿದ್ದ. ಇತ್ತ ಬಟ್ಟೆ ಒಗೆಯಲು ತೆರಳಿದ್ದ ತಾಯಿ, ಬಾಲಕ ಗೇಟ್ ತೆಗೆದು ಹೊರಗೆ ಹೋಗೋದು ನೋಡಿದ್ದಳು. ಆದರೆ, ಬಾಲಕ ವಾಪಾಸ್ ಬಂದು ಮನೆಯ ಮೊದಲ ಮಹಡಿಯ ಮೆಟ್ಟಿಲ ಕೆಳಗೆ ಮಲಗಿರೋದು ಯಾರೂ ನೋಡಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ತಾಯಿ ಮಗು ಕಿಡ್ನ್ಯಾಪ್ ಆಗಿದೆ ಅಂತಾ ಭಾವಿಸಿದ್ದು, ಈ ಸುದ್ದಿ ನಾಲ್ವೆಡೆ ಹಬ್ಬಿತ್ತು. ಕೊನೆಗೂ ತನ್ನದೇ ಮನೆಯೊಳಗೆ ಮಗು ಸಿಕ್ಕಿದ್ದರಿಂದ ಸಮಾಧಾನ ಪಟ್ಟಿರುವ ಸ್ಥಳೀಯರು ಹಾಗೂ ಪೊಲೀಸರಿಗೆ ನಗಬೇಕೋ ಅಥವಾ ಅಳಬೇಕೋ ಅನ್ನೋ ಸ್ಥಿತಿ ಎದುರಾಗಿದ್ದಂತೂ ಸತ್ಯ.
