ಕುಮಟಾ: ಕಾಡಿನಿಂದ ನಾಡಿಗೆ ಬಂದು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದ ಘಟನೆ ಕುಮಟಾ ತಾಲೂಕಿನ ಧಾರೇಶ್ವರ ಗ್ರಾಮದ ಹರ್ನಿರಿನಲ್ಲಿ ನಡೆದಿದೆ.
ಕೆಲವು ದಿನಗಳಿಂದ ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಪ್ರತಿದಿನ ರಾತ್ರಿ ರೈತರ ಕೊಟ್ಟಿಗೆಯಲ್ಲಿನ ಜಾನುವಾರುಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿತ್ತು. ಚಿರತೆಯ ಉಪಟಳ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಪ್ರವೀಣ್ ಕುಮಾರ್ ನೇತೃತ್ವದ ತಂಡ ಹರ್ನಿರ್ ಗ್ರಾಮದಲ್ಲಿ ಚಿರತೆ ಹಿಡಿಯಲು ಬೋನು ಅಳವಡಿಸಿತ್ತು. ಸುಮಾರು ನಾಲ್ಕು ದಿನಗಳ ಬಳಿಕ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸೆರೆಹಿಡಿದರು.
ಚಿರತೆ ಸೆರೆಯಾದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಅಕ್ಕಪಕ್ಕದ ಊರಿನ ಜನರು ಸ್ಥಳಕ್ಕೆ ಆಗಮಿಸಿ ಫೋಟೊ ತೆಗೆಯಲು ಮುಗಿಬಿದ್ದರು. ಸುಮಾರು ಒಂದು ತಿಂಗಳಿನಿಂದ ಜಾನುವಾರುಗಳ ಮೇಲಿನ ದಾಳಿಯಿಂದ ಕಂಗೆಟ್ಟಿದ್ದ ಹರ್ನಿರು ಗ್ರಾಮದ ನಿವಾಸಿಗಳು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
