Sirsi | ನಗರದ ಸಿಂಪಿಗಲ್ಲಿಯಲ್ಲಿ ಎರಡು ಗುಂಪಿನ ಯುವಕರು ಸಾರ್ವಜನಿಕ ರಸ್ತೆಯಲ್ಲೇ ಗ್ಯಾಂಗ್ ಕಟ್ಟಿಕೊಂಡು ಹೊಡೆದಾಡಿಕೊಂಡ ಘಟನೆ ಭಾರೀ ಸಂಚಲನ ಮೂಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಆರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಸಿಯ ನೆಹರು ನಗರದ ಅಯಾನ್ ಅಬ್ದುಲ್ ಅಲಿಂ ಟಿನಮೇಕ‌ರ್, ಸರ್ಪರಾಜ ತಂದೆ ಅಸ್ಲಂ ಟಿನಮೇಕ‌ರ್, ఆదిలో ದಾದಾಸಾಬ್ ಸಕ್ಕರಖಾನ್ ಹಾಗೂ ಬನವಾಸಿ ರಸ್ತೆಯ ಅಭಯ್ ಪ್ರಕಾಶ ಹುದಾರ್‌, ಸಿಂಪಿಗಲ್ಲಿಯ ಸರ್ವೇಶ ಮಾಲೇಶ್ ಹಿರೇಮಠ ಮತ್ತು ಅಕಾಶ ಗೋಪಾಲ ಕುಂದನಗಾರ ಎಂಬ ಆರು ಯುವಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಬೈಕ್ ಢಿಕ್ಕಿಯಿಂದ ಶುರುವಾದ ವೈಷಮ್ಯ: ನಗರದ ದೇವಿಕೆರೆ ಭಾಗದಲ್ಲಿ ನಡೆದ ಮೋಟಾರ್‌ಸೈಕಲ್ ಢಿಕ್ಕಿ ಘಟನೆ ಎರಡು ಗುಂಪಿನ ಯುವಕರ ನಡುವೆ ತೀವ್ರ ಮನಸ್ತಾಪಕ್ಕೆ ಕಾರಣವಾಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮೇ 21ರ ರಾತ್ರಿ ಸಿಂಪಿಗಲ್ಲಿಯಲ್ಲಿ ಎರಡೂ ಗುಂಪಿನ ಯುವಕರು ಮುಖಾಮುಖಿಯಾಗಿದ್ದು, ಮಾತಿನ ಚಕಮಕಿಯೇ ಕ್ಷಣಾರ್ಧದಲ್ಲಿ ಹೊಡೆದಾಟಕ್ಕೆ ತಿರುಗಿದೆ. ರಸ್ತೆಯಲ್ಲೇ ಕೈಕೈ ಮಿಲಾಯಿಸಿದ ಯುವಕರು ಸಾರ್ವಜನಿಕ ಸ್ಥಳದಲ್ಲೇ ಯುವಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡು ಬಡಿದಾಡಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಪ್ರಕರಣ ನಗರದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ವೈರಲ್ ವಿಡಿಯೋ ಆಧರಿಸಿ ಪೊಲೀಸ್ ಕ್ರಮ: ಗಲಾಟೆಯ ವಿಡಿಯೋ ಹಾಗೂ ಸಾರ್ವಜನಿಕರಿಂದ ಬಂದ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ, ಎರಡೂ ಗುಂಪಿನ ಆರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಶಿರಸಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.