Karwar| ಗಾಂಜಾ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು‌ ನಗರದ ಕೋಣೆವಾಡಾದ ಕೆ.ಇ.ಬಿ ರಸ್ತೆಯ ಹಸೇನ್ ತಂದೆ ಬಾಷಾ ಅತ್ತಾರ (31) ಎಂದು ಗುರುತಿಸಲಾಗಿದೆ.

ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ನಗರದ ಕೋಣೇವಾಡ ಇಂದಿರಾ ಕ್ಯಾಂಟೀನ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ವೇಳೆ ಪತ್ತೆಯಾಗಿದ್ದಾನೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಪರೀಕ್ಷೆಯಲ್ಲಿ ಗಾಂಜಾದಲ್ಲಿರುವ ಟೆಟ್ರಾಹೈಡ್ರೋಕ್ಯಾನಾಬಿನಾಲ್ (THC) ಅಂಶ ಪತ್ತೆಯಾಗಿರುವುದಾಗಿ ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರವಾರ ಶಹರ ಪೊಲೀಸರು ಆರೋಪಿ‌ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.