ಕಾರವಾರ ತಾಲೂಕಿನ ವ್ಯಾಪ್ತಿಯ ಕಾಳಿ‌ ನದಿಯಲ್ಲಿ ಹೊರ ಜಿಲ್ಲೆಗಳ ಮೀನುಗಾರು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದು, ಇದರಿಂದ ಸ್ಥಳೀಯ ಒಳನಾಡು‌ ಮೀನುಗಾರರು ತೊಂದರೆಗೀಡಾಗಿದ್ದಾರೆ. ಹೀಗಾಗಿ ಕೂಡಲೇ ಹೊರ ಜಿಲ್ಲೆಗಳ ಮೀನುಗಾರರ ಮೇಲೆ ಸೂಕ್ತ ಕ್ರಮಕ್ಕೆ ಉಳಗಾ ಪಾಗಿ ಮೀನುಗಾರರ ಸಹಕಾರ ಸಂಘದ ಸದಸ್ಯರು ಜಿಲ್ಲಾಡಳಿವನ್ನು ಒತ್ತಾಯಿಸಿದ್ದಾರೆ.

ಅವರು ತಮ್ಮ ಮನವಿಯಲ್ಲಿ ಕದ್ರಾ ಮಲ್ಲಾಪುರ, ಬೋಳೆ, ಇರಪಾಗೆ, ಬಾಳ್ನಿ, ಕೆರವಡಿ, ಖಾರ್ಗಾ ಹಾಗೂ ಉಳಗಾ ವ್ಯಾಪ್ತಿಯಲ್ಲಿರುವ ಪಾಗಿ ಸಮಾಜದ ಮೀನುಗಾರರು ಕಾಳಿನದಿಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಮತ್ತು ಇದನ್ನೇ‌ ನಂಬಿ ಸಮುದಾಯದವರು ಜೀವನ ಸಾಗಿಸುತ್ತಿದ್ದಾರೆ.

ಪರಿಸರದ ಅಸಮತೋಲನ, ಹವಾಮಾನ ವೈಪರೀತ್ಯ ಮತ್ತು ಕಾಳಿ ನದಿಗೆ ಅಣೆಕಟ್ಟು ನಿರ್ಮಾಣ ಸೇರಿದಂತೆ ನಾನಾ ಕಾರಣಗಳಿಂದಾಗಿ ಈ ಭಾಗದಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ.

ಹೀಗಿರುವಾಗ ಈ ಪ್ರದೇಶದಲ್ಲಿ ಹೊರ ಜಿಲ್ಲೆಯ ಒಳನಾಡು ಮೀನುಗಾರರು ಬಂದು ಅವೈಜ್ಞಾನಿಕ ಮೀನುಗಾರಿಕೆಯಲ್ಲಿ ತೊಡಗಿದ್ದು, ಸಂತಾನೋತ್ಪತ್ತಿಗೆ ಬಂದ ಮೀನು ಮತ್ತು ಮೀನು ಮರಿಗಳನ್ನು ಹಿಡಿಯುವ ಮೂಲಕ ಈ ಭಾಗದಲ್ಲಿ ಮತ್ಸ್ಯ ಕ್ಷಾಮ ಕ್ಕೆ ಕಾರಣರಾಗುತ್ತಿದ್ದಾರೆ. ಇದಲ್ಲದೇ ನಸುಕಿನಲ್ಲಿ ಮೀನುಗಾರಿಕೆಗೆ ನಡೆಸಲು ತೆರಳುವ ಸ್ಥಳೀಯ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದು ಮೀನುಗಾರರ ಮಧ್ಯೆ ಸಂಘರ್ಷದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ.

ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೊರ ಜಿಲ್ಲೆಗಳಿಂದ ಬಂದ ಮೀನುಗಾರರಿಗೆ ಈ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಬಾರದು ಮತ್ತು ಈ ಮೂಲಕ ಸಂಘರ್ಷದ ವಾತಾವರಣವನ್ನು ತಪ್ಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಪಾಗಿ ಮೀನುಗಾರರ ಸಹಕಾರ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ಮೀನುಗಾರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ, ವಿಶ್ವಾಸ ವೆಂಕಟರಾಯ ತಳಪಣಕರ, ಶ್ಯಾಮ ಪಾಗಿ, ಸಂದೀಪ್ ಪಾಗಿ, ರಾಜು ಪಾಗಿ, ಕೃಷ್ಣಾನಂದ ಪಾಗಿ, ಅಬೂ ಪಾಗಿ, ಸುಭಾಷ್ ಪಾಗಿ ಹಾಗೂ ಸತ್ಯವಾನ್ ಪಾಗಿ ಸೇರಿದಂತೆ ಹಲವರು ಇದ್ದರು.