Sirsi| ಉತ್ತರಕನ್ನಡ ಶಿರಸಿ ತಾಲೂಕಿನ ಬಿಳೂರು ಗ್ರಾಮದಲ್ಲಿ ಭರ್ಜರಿ ಕೆರೆ ಬೇಟೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸುಮಾರು ಸಾವಿರಕ್ಕೂ ಹೆಚ್ಚು ಜನರು ಈ ಕೆರೆ ಬೇಟೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಬಿಳೂರು ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಈ ವಿಶೇಷ ಕೆರೆ ಬೇಟೆಯನ್ನು ಆಯೋಜಿಸಲಾಗಿತ್ತು. ವಿವಿಧ ಊರುಗಳಿಂದ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಕೆರೆಯಲ್ಲಿನ ಮೀನುಗಳನ್ನು ಹಿಡಿಯಲು ಉತ್ಸಾಹದಿಂದ ಪಾಲ್ಗೊಂಡರು.
ಮೀನು ಹಿಡಿಯಲು ಭಾಗವಹಿಸಲು ತಲಾ ಎಂಟು ನೂರು ರೂಪಾಯಿಯ ಶುಲ್ಕ ವಿಧಿಸಲಾಗಿತ್ತು. ಸಂಗ್ರಹವಾದ ಈ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೀನು ಹಿಡಿಯಲು ಕೆಲ ನಿರ್ಬಂಧ ವಿಧಿಸಲಾಗಿತ್ತು. ಬಲೆ ಬಳಸಿ ಮೀನು ಹಿಡಿಯಲು ಅವಕಾಶ ಇರಲಿಲ್ಲ. ಬದಲಾಗಿ ಬಿದರಿನ ಬುಟ್ಟಿ ಬಳಸಿ ಮೀನು ಹಿಡಿಯುವಂತೆ ನಿಯಮ ವಿಧಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆಲವರಿಗೆ ಭರ್ಜರಿ ಪ್ರಮಾಣದ ಮೀನು ಸಿಕ್ಕು ಸಂತಸಪಟ್ಟರು. ಇನ್ನೂ ಕೆಲವರು ಮೀನು ಸಿಗದೆ ನಿರಾಸೆಪಟ್ಟು ಬರಿ ಗೈಯಲ್ಲೇ ಹಿಂದಿರುಗಿದರು.
ಒಟ್ಟಿನಲ್ಲಿ, ಧಾರ್ಮಿಕ ಕಾರ್ಯಕ್ಕಾಗಿ ಆಯೋಜಿಸಲಾದ ಈ ಕೆರೆ ಬೇಟೆ ಗ್ರಾಮದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಇದನ್ನು ವಿಕ್ಷೀಸಲು ಸ್ಥಳೀಯರು ಸೇರಿದಂತೆ ಪಕ್ಕ ಊರಿನವರು ಸಹ ಸೇರಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
