Bhatkal|ಭಟ್ಕಳದ ಗ್ರಾಮ ದೇವ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಶುಕ್ರವಾರದಂದು ರಾಮನವಮಿಯ ಪರ್ವಕಾಲದಲ್ಲಿ ಸಹಸ್ರಾರು ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಸಂಭ್ರಮದಿಂದ ಜರುಗಿತು.
ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೇಯ ದಿನದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು.
ಜಾತ್ರಾ ಮಹೋತ್ಸವದ ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳು ಗೋಕರ್ಣದ ತಾಂತ್ರಿಕರಾದ ವೇದಮೂರ್ತಿ ಶ್ರೀನಿವಾಸ ಅಡಿಗರು ಇವರ ತಾಂತ್ರಿಕತ್ವದಲ್ಲಿ ದೇವಸ್ಥಾನದ ಅರ್ಚಕ ಪ್ರಮೋದ ಶಂಕರ ಭಟ್ಟ ಬಚ್ಚೋಡಿ ಅವರ ಅರ್ಚಕತ್ವದಲ್ಲಿ ನಡೆಯಿತು. ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ರಥಕಾಣಿಕೆಗಾಗಿ ಸರತಿಯ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.
ತಾಲೂಕಿನ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಆಗಮಿಸಿದ ಸಹಸ್ರಾರು ಜನರು ಪೂಜೆ ಪುನಸ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಜೆ 5:30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ವಾಡಿಕೆಯಂತೆ ಜರ್ಕಿಯ ಅನ್ಸಾರಿ, ಶಾಬಂದ್ರಿ ಮನೆ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ರಾಮನವಮಿಯ ಶುಕ್ರವಾರದಂದು ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಭಕ್ತ ಹನುಮನ ರಥೋತ್ಸವ ಜರುಗಿತು.
ಸಂಪ್ರದಾಯದಂತೆ ಜೈನ ಹಾಗೂ ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಇದೇ ರೀತಿ ಪ್ರತಿ ವರ್ಷವೂ ಹಿಂದು-ಮುಸ್ಲಿಂ, ಜೈನರು ಸೇರಿ ಎಲ್ಲ ಧರ್ಮದವರೂ ಪಾಲ್ಗೊಳ್ಳುವುದು ಭಟ್ಕಳ ಜಾತ್ರೆಯ ವಿಶೇಷವಾಗಿದೆ. ಸಹಸ್ರಾರು ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನ ಕಂಡು ಭಕ್ತರು ಪುನೀತರಾದರು.
ರಥ ಸಾಗಿ ಬರುವ ಇಕ್ಕೆಲ್ಲದ ಹಾದಿಯಲ್ಲಿನ ಕಟ್ಟಡದ ಮೇಲೆ ನಿಂತು ಭಾರಿ ಜನಸ್ತೋಮದ ನಡುವೆ ರಥದಲ್ಲಿನ ಆಂಜನೇಯನಿಗೆ ನಿಂತಲ್ಲಿಯೇ ಕೈಮುಗಿದು ನಮಸ್ಕರಿಸಿದರು. ಭಾರಿ ಸೆಕೆಯ ನಡುವೆಯು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು ಊರ ಜಾತ್ರೆಯ ಕಳೆ ಇನ್ನಷ್ಟು ಹೆಚ್ಚಿತು.
ಬ್ರಹ್ಮರಥವನ್ನು ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು. ರಥೋತ್ಸವದ ಸಂದರ್ಭದಲ್ಲಿ ಸುಮಾರು 25 ಸಾವಿಕ್ಕೂ ಅಧಿಕ ಭಕ್ತಾಧಿಗಳು ಪಾಲ್ಗೊಂಡಿದ್ದರು.
