Bhatkal: ನಗರದ ವೆಂಕಟಾಪುರದ ಜಾಗಟೆಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಾದಿ ಕಾಲದಿಂದಲೂ ದೇವರ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆಯನ್ನು ಅನ್ಯಕೋಮಿನವರ ವಿರೋಧದ ನಡುವೆಯೂ ಪುನಃ ಸ್ಥಾಪಿಸಿ, ಈ ಮೂಲಕ ಹಿಂದೂ ಸಂಘಟನೆಯ ಕಾರ್ಯಕರ್ತರು ಜನರ ಹಲವು ತಿಂಗಳ ಕನಸನ್ನು ನನಸಾಗಿಸಿದ್ದಾರೆ.

ಕಳೆದ ಸುಮಾರು ಮೂರ್ನಾಲ್ಕು ವರ್ಷಗಳಿಂದ ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ಮುರಿನಕಟ್ಟೆ ಪ್ರದೇಶವನ್ನು ಸ್ವಚ್ಛಗೊಳಿಸಿ, ಅಲ್ಲಿದ್ದ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು. ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದ ಮುರಿನಕಟ್ಟೆಯನ್ನು ಪುನಃ ಕಟ್ಟಿಕೊಡುವಂತೆ ಹಿಂದೂ ಸಂಘಟನೆಗಳು ಹಲವು ಸಲ ಬೇಡಿಕೆ ಕೂಡಾ ಸಲ್ಲಿಸಿದ್ದವು. ಇದನ್ನು ಈಡೇರಿಸಲು ತಾಲೂಕಾ ಆಡಳಿತವಾಗಲೀ, ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೇ, ಮುರಿನಕಟ್ಟೆ ಪ್ರದೇಶವನ್ನು ಅನ್ಯ ಕೋಮಿನ ಕೆಲವರು ಮನೆ ಕಟ್ಟುವ ಉದ್ದೇಶದಿಂದ ಅತಿಕ್ರಮಣ ಮಾಡುವ ಭೀತಿಯೂ ಜನರಲ್ಲಿ ಕಾಡಿತ್ತು.

ಇದರಿಂದ ಈ ಹಿಂದೆ ಹಲವು ಬಾರಿ ಕಟ್ಟೆಯನ್ನು ಕಟ್ಟಲು ಪ್ರಯತ್ನಿಸಿದರೂ ತಾಲೂಕಾ ಆಡಳಿತ, ಪೊಲೀಸ್ ಇಲಾಖೆಯ ಅಡ್ಡಿಯಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾದು ನೋಡುವ ತಂತ್ರವನ್ನು ಅನುಸರಿಸಿದರು. ಆದರೆ, ಅಂತಿಮವಾಗಿ ಮುರಿನಕಟ್ಟೆಯ ಹಿಂಬದಿಯಲ್ಲಿ ಅನ್ಯಕೋಮಿನವರು ಮನೆ ಕಟ್ಟಲು ಆರಂಭಿಸಿದಾಗ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದರು. ನಮ್ಮ ಸ್ಥಳ ನಮಗೆ ಬೇಕು, ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರವಾದ ಮುರಿನಕಟ್ಟೆಯನ್ನು ಮರುಸ್ಥಾಪಿಸಬೇಕು ಎಂದು ಪಟ್ಟು ಹಿಡಿದ್ದರು. ಇಲಾಖೆಯಿಂದಲೇ ಮುರಿನಕಟ್ಟೆ ಮರು ಸ್ಥಾಪನೆಗೊಳ್ಳುವ ಭರವಸೆ ಹುಸಿಯಾದ ಬಳಿಕ, ಅವರು ನೀಡಿದ್ದ ಅವಧಿಯೂ ಮುಗಿದಿದ್ದರಿಂದ ರವಿವಾರ ಬೆಳಿಗ್ಗೆ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಹಿಂದೂ ಸಂಘಟನೆಯ ಕಾರ್ಯಕರ್ತರು ಮುರಿನಕಟ್ಟೆಯನ್ನು ಈ ಹಿಂದೆ ಇದ್ದ ಜಾಗಾದಲ್ಲಿಯೇ ನಿರ್ಮಾಣ ಮಾಡಿದರು.

ರವಿವಾರ ಬೆಳಿಗ್ಗೆ ಸುಮಾರು 9 ಗಂಟೆಯ ಸಮಯಕ್ಕೆ ಸೇರಿದ ಜನ ಕಟ್ಟೆಯನ್ನು ಕಟ್ಟಲು ಆರಂಭಿಸಿದರು. ಸುದ್ದಿ ತಿಳಿದ ತಕ್ಷಣ ಪೊಲೀಸರು ಆಗಮಿಸಿದರಾದರೂ ಇಲಾಖೆ ಕೊಟ್ಟ ಗಡುವು ಮೀರಿದ್ದರಿಂದ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಾಗಿಲ್ಲ. ಇಲಾಖೆಯ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡರು. ಕೆಲವು ಅನ್ಯಕೊಮಿನ ವ್ಯಕ್ತಿಗಳು ಸ್ಥಳದಲ್ಲಿ ತಕರಾರು ತೆಗೆದರೂ ಸರಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ಹಿನ್ನೆಲೆ ಅವರ ಮಾತು ನಡೆಯಲಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರು ಯಾವುದಕ್ಕೂ ಪ್ರಾಮುಖ್ಯತೆಯನ್ನು ಕೊಡದೇ ಕೊನೆಗೂ ಯಶಸ್ವಿಯಾಗಿ ಮುರಿನಕಟ್ಟೆಯನ್ನು ಮರುಸ್ಥಾಪನೆ ಮಾಡಿದ್ದಾರೆ.