ಸ್ವಾಮೀಜಿಯೋರ್ವನ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಕೈಯಿಂದ ತನ್ನ ಪುತ್ರಿಯನ್ನು ರಕ್ಷಣೆ ಮಾಡಲು ಹೋಗಿ ಅಮಾಯಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಅವರಗುಪ್ಪಾದಲ್ಲಿ ನಡೆದಿದೆ.

ಈ ಘಟನೆಯಲ್ಲಿ ವಸಂತ ಜಟ್ಯಾ ನಾಯ್ಕ್ (41), ಎಂಬವರ ಎದೆ ಹಾಗೂ ಕೈಗೆ ಚಾಕು ಇರಿದ ಕಾರಣ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದು, ಇತರ ಗಾಯಾಳುಗಳಾದ ಮಹೇಶ್ ಜಟ್ಯಾ ನಾಯ್ಕ್ (37) ಹಾಗೂ ನೆರೆಮನೆಯ ಕುಮಾರ್ ನಾರಾಯಣ ನಾಯ್ಕ್ (35) ಎಂಬವರಿಗೂ ಎದೆಗೆ ಗಾಯವಾದ ಕಾರಣ ಶಿವಮೊಗ್ಗ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಪ್ರಕರಣದ ಆರೋಪಿಗಳಾದ ಸಿದ್ಧಾಪುರ ಹೊಸೂರಿನ ಸುಚಿತ್ರಾ, ಆಕೆಯ ತಂದೆ ಶಿವಮೊಗ್ಗದ ಲೋಕನಾಥ ಚೌಡಪ್ಪ ನಾಯ್ಕ, ಹೆಮ್ಮನಬೈಲಿನ ಕಮಲಾಕರ ಸ್ವಾಮಿ ಹಾಗೂ ಇತರ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಅಂದಹಾಗೆ, ಸಿದ್ಧಾಪುರ ತಾಲೂಕಿನ ಅವರಗುಪ್ಪಾದ ಮಹೇಶ ಜಟ್ಯಾ ನಾಯ್ಕ್ (37), ಕಳೆದ 20 ವರ್ಣದ ಹಿಂದೆ ಸುಚಿತ್ರಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಅನ್ನೋ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಕುಟುಂಬ ಬಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಿತ್ತು.

ಕ್ರಮೇಣ ಕುಟುಂಬ ನಿರ್ವಹಣೆಗಾಗಿ ಮಹೇಶ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ಸಿದ್ದಾಪುರದಲ್ಲಿ ಒಂಟಿಯಾಗಿದ್ದ ಸುಚಿತ್ರಾಳನ್ನು ಕರುಣಾಕರ ಸ್ವಾಮಿ ಎನ್ನುವಾತ ಪುಸಲಾಯಿಸಿದ ಕಾರಣ ಕಳೆದ 6 ತಿಂಗಳಿನಿಂದ ಸುಚಿತ್ರಾ ತನ್ನ ಗಂಡನಿಗೆ ಗೊತ್ತಿಲ್ಲದಂತೇ ತನ್ನ ಇಬ್ಬರು ಹೆಣ್ಣು ಮಕ್ಕಳ ಜತೆ ಈ ಸ್ವಾಮೀಜಿ ಜತೆ ವಾಸವಿದ್ದಳು. ಕರುಣಾಕರ ಸ್ವಾಮಿ ಕೂಡಾ ಶಿವಮೊಗ್ಗಕ್ಕೆ ಕರೆದೊಯ್ದು ಈಕೆಯ ಜತೆ ಉಪ ಸಂಸಾರ ಪ್ರಾರಂಭಿಸಿದ್ದ.

ತಾಯಿಯ ಈ ವರ್ತನೆಯಿಂದ ಬೇಸತ್ತ ಮಗಳು ಸುಮಶ್ರಿ ಫೆ.1ರಂದು ತಂದೆ ಮಹೇಶನಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿ” ಪ್ಲೀಸ್ ಪಪ್ಪಾ ನಮ್ಮನ್ನು ಕರೆದುಕೊಂಡು ಹೋಗಿ. ಮಮ್ಮಿಯ ಟಾರ್ಚರ್ ತಡೆದುಕೊಳ್ಳಲು ಆಗುತ್ತಿಲ್ಲ. ಬೇಗ ಬಂದು ಕರೆದುಕೊಂಡು ಹೋಗಿ ಪಪ್ಪಾ, ಇಲ್ಲಾಂದ್ರೆ ನಾನು ಸತ್ತು ಹೋಗುತ್ತೇನೆ ಪಪ್ಪಾ. ಅಮ್ಮಾ ಕಮಲಾಕರ್ ಸ್ವಾಮಿ ಜತೆ ಮಲಗುತ್ತಾಳೆ, ನಾವಿಬ್ಬರು ಬೇರೆ ಕೋಣೆಯಲ್ಲಿ ಮಲಗುತ್ತೇವೆ, ಪ್ರಶ್ನೆ ಮಾಡಿದರೆ ವಿಷ ಹಾಕಿ ಸಾಯಿಸುತ್ತೇನೆ, ಎಂಬಿತ್ಯಾದಿ ಮೇಸೇಜ್ ಮಾಡಿದ್ದಳು.

ಬಳಿಕ ಮಗಳಿಗೆ ಕರೆ ಮಾಡಿದ  ಶಿವಮೊಗ್ಗದಿಂದ ಸಿದ್ಧಾಪುರಕ್ಕೆ ಬಸ್ ಮೂಲಕ ಬರುವಂತೆ ಹೇಳಿದ್ದರಿಂದ ತಂದೆಯ ಮಾತು ಕೇಳಿ ಮಗಳು ಸುಮಶ್ರಿ ಸಿದ್ದಾಪುರಕ್ಕೆ ಆಗಮಿಸಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಪತ್ನಿ ತನ್ನ ಮಗಳ ಮೇಲೆ ತೋರಿದ ಕ್ರೌರ್ಯವನ್ನು ಮಹೇಶ ಸಿದ್ದಾಪುರ ಪೋಲಿಸ್ ಠಾಣೆಗೆ ಹೋಗಿ ಘಟನೆಯ ಕುರಿತಾಗಿ ವಿವರಿಸಿದ್ದಾನೆ‌. ಬಳಿಕ ಪೋಲಿಸರ ನಿರ್ದೇಶನದ ಮೇರೆಗೆ ಶಿರಸಿಯ ಮಕ್ಕಳ ಕಲ್ಯಾಣ ಅಧಿಕಾರಿಗಳಬಳಿ ವಿರುದ್ದ ದೂರು ನೀಡುತ್ತಾನೆ. ಅವರು ಗುರುವಾರ ವಿಚಾರಣೆಗೆ ಬರುವಂತೆ ಹೇಳಿ ಕಳುಹಿಸಿದ್ದಾರೆ.

ಶಿರಸಿಯಿಂದ ನೇರವಾಗಿ ಅರವರಗುಪ್ಪಕ್ಕೆ ಬಂದು ತನ್ನ ಅಣ್ಣನಾದವಸಂತನಿಗೆ ಕರೆಮಾಡಿ  ಪತ್ನಿ ಸುಚಿತ್ರಾಳ ಚಿತ್ರಹಿಂಸೆಗೆ ಅಂಜಿ ಮಗಳು ಮನೆಗೆ ಬಂದಿದ್ದಾಳೆ. ನೀವು ಇಲ್ಲಿ ಬನ್ನಿ ಎಂದು ಕರೆದಿದ್ದಾನೆ. ತಕ್ಷಣ ಮನೆಗೆ ಆಗಮಿಸಿದ ಮಹೇಶನ ಅಣ್ಣ ವಸಂತ ಸೇರಿದಂತೆ ಮನೆಯ ಹಿರಿಯರೆಲ್ಲಾ ಸೇರಿ ಪುಟ್ಟ ಬಾಲಕಿ ಸುಮಶ್ರಿಯ ಬಳಿ ಮಾತನಾಡಿ ಮಕ್ಕಳು ಎದುರಿಸುತ್ತಿದ್ದ ಕಷ್ಟದ ಬಗ್ಗೆ ಕೇಳುತ್ತಿದ್ದರು‌.

ಊಟಕ್ಕೆ ಸಾರು ಬಿಸಿ ಮಾಡಲು ತಯಾರಾಗುತ್ತಿದ್ದಾಗ ರಾತ್ರಿ ಸುಮಾರು 9.45 ಅಂದಾಜಿಗೆ ಏಕಾಏಕಿ ಮನೆಗೆ ಧಾವಿಸಿ ಬಂದ ಸುಚಿತ್ರಾ ಹಾಗೂ ಆಕೆಯ ತಂದೆ, ಹಾಗೂ ಅವರ ಜೊತೆ ಬಂದ ನಾಲ್ಕು ಅಪರಿಚಿತರ ನಡುವೆ ಸಂಘರ್ಷ ನಡೆದಿದೆ. ವಾದ ವಿವಾದ ತಾರಕಕ್ಕೇರಿದ್ದು ಕೈ ಕೈ ಮಿಗಿಲಾಯಿಸುವ ಹಂತಕ್ಕೆ ತೆರಳಿ ಅಂತಿಮವಾಗಿ ಸುಚಿತ್ರಾ ಹಾಗೂ ಆಕೆಯ ಜೊತೆಗೆ ಬಂದಿದ್ದ ನಾಲ್ವರು ಸೇರಿ ಮಹೇಶನ ಅಣ್ಣನಾದ ವಸಂತನೆ ಎದೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಮಹೇಶ ಹಾಗೂ ನೆರೆಮನೆಯ ಕುಮಾರ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾ ನಾಯ್ಕ, ಲೋಕನಾಥ ನಾಯ್ಕ, ಕರುಣಾಕರ ಸ್ವಾಮಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಸಿದ್ಧಾಪುರ ಹಾಗೂ ಶಿವಮೊಗ್ಗದಲ್ಲಿ ಹಿಡಿದ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.