ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿದ್ದ ‘ಸಂಶುದ್ದೀನ್ ಸರ್ಕಲ್’ ಪ್ಯೂರ್ ಗೋಲ್ಡ್ ಗಡಿಯಾರ ಗೋಪುರ ಇದೀಗ ಇತಿಹಾಸದ ಪುಟಗಳಿಗೆ ಸೇರಿದೆ.
ಸುಮಾರು 24 ವರ್ಷಗಳಿಂದ ಭಟ್ಕಳದ ಗುರುತಾಗಿದ್ದ ಈ ಗೋಪುರವನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಜೆಸಿಬಿ ಯಂತ್ರದ ಸಹಾಯದಿಂದ ನೆಲಸಮಗೊಳಿಸಲಾಗಿದೆ.
ಅಂದಹಾಗೆ, 2002ರಲ್ಲಿ ಪ್ಯೂರ್ ಗೋಲ್ಡ್ ಮಳಿಗೆ ಮಾಲಕ ಶಬೀಬ್ ಕೋಲಾ ಅವರು ಸುಮಾರು 8ರಿಂದ 10 ಲಕ್ಷ ರೂ. ವೆಚ್ಚದಲ್ಲಿ ಈ ಗೋಪುರ ನಿರ್ಮಾಣ ಮಾಡಿಸಿದ್ರು. ದುಬೈಯಲ್ಲಿ ಕಂಡ ಗಡಿಯಾರದ ಗೋಪುರದ ವಿನ್ಯಾಸದಿಂದ ಅವರು ಪ್ರೇರಿತರಾಗಿ ನಿರ್ಮಿಸಿದ ಈ ಗೋಪುರ ರಚನೆಯಲ್ಲಿ ನಾಲ್ಕು ದಿಕ್ಕುಗಳಲ್ಲಿ ಗಡಿಯಾರ, ಮಧ್ಯದಲ್ಲಿ ಚಿನ್ನದ ಬಣ್ಣದ ಬಳೆ ಮಾದರಿ ಹಾಗೂ ತುದಿಯಲ್ಲಿ ಸುಮಾರು 2 ಟನ್ ತೂಕದ ಗ್ರಾನೈಟ್ ಬಾಲ್ ಇರಿಸಿದ್ದರಿಂದ ಒಟ್ಟು ಗೋಪುರ ಆಕರ್ಷಕವಾಗಿ ಕಾಣುತ್ತಿತ್ತು.
ಸಾಮಾನ್ಯವಾಗಿ ಭಟ್ಕಳ ಅಂದ್ರೆ, ಮೊದಲಿಗೆ ಕಣ್ಣಮುಂದೆ ಬರುತ್ತಿದ್ದದ್ದೇ ಈ ಗೋಪುರ. ಭಟ್ಕಳದಲ್ಲಿ ಯಾವುದೇ ವಿಜಯೋತ್ಸವ ನಡೆದರೂ ಜನರು ಈ ಗೋಪುರ ಹತ್ತಿ ಬಾವುಟಗಳನ್ನು ಹಾರಿಸ್ತಿದ್ರು. ಯಾವುದೇ ಕಾರ್ಯಕ್ರಮ ನಡೆದಾಗಲೂ ಈ ಗೋಪುರವನ್ನು ಸಿಂಗಾರ ಮಾಡ್ತಿದ್ದದ್ದರಿಂದ ಭಟ್ಕಳ ಪಟ್ಟಣ ಈ ಗೋಪುರದಿಂದಾಗಿ ಕಂಗೊಳಿಸುತ್ತಿತ್ತು. ವಿವಿಧ ರಾಜಕೀಯ ಪ್ರತಿಭಟನೆಗಳು, ಜಾಗೃತಿ ಜಾಥಾಗಳು, ವಿಜಯೋತ್ಸವಗಳು ಸೇರಿದಂತೆ ಸಾವಿರಾರು ಕಾರ್ಯಕ್ರಮಗಳಿಗೆ ಈ ವೃತ್ತ ಸಾಕ್ಷಿಯಾಗಿತ್ತು. ಅಲ್ಲದೇ,
ಪ್ರವಾಸಿಗರಿಗೂ ಇದು ಸೆಲ್ಫಿ ಪಾಯಿಂಟ್ ಆಗಿತ್ತು. ಯಾವಾಗ ರಸ್ತೆ ಕಾಮಗಾರಿಗಾಗಿ ಜೆಸಿಬಿ ಕೈಚಾಚುತ್ತಿತ್ತೋ ಕೂಡಲೇ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ವೃತ್ತದತ್ತ ಧಾವಿಸಿ, ಇತಿಹಾಸದ ಪುಟ ಸೇರುವುದಕ್ಕೆ ಸಾಕ್ಷಿಯಾದರು. ಹಲವರು ಮೊಬೈಲ್ ಫೋನ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ನೆನಪಾಗಿ ಉಳಿಸಿಕೊಂಡರು. ಕಾರ್ಯಾಚರಣೆಯ ವೇಳೆ ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಈ ಹಿಂದೆ ಗೋಪುರದ ಗಡಿಯಾರ ಸಾಕಷ್ಟು ಸಮಯಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ, ನಿರ್ವಹಣೆ ಕೊರತೆ ಹಾಗೂ ದುರಸ್ತಿ ಮಾಡದ ಕಾರಣ ಗಡಿಯಾರ ಕೆಲಸ ಮಾಡುವುದೇ ನಿಂತುಹೋಗಿತ್ತು. ಸಮರ್ಪಕ ನಿರ್ವಹಣೆ ಇಲ್ಲದೇ ಗೋಪುರದ ಹೊಳಪು ಕೂಡಾ ಕುಂದಿತ್ತು. ಆದರೂ ಪಟ್ಟಣದ ಹೆಗ್ಗುರುತಾಗಿ ಉಳಿದಿದ್ದ ಈ ರಚನೆ, ಇದೀಗ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಮರೆಯಾಗಬೇಕಾಯ್ತು.
ಈ ಹಿಂದೆ ಈ ವೃತ್ತದ ಬಳಿ ನಡೆಯುತ್ತಿದ್ದ ಹಬ್ಬಗಳು, ವಿವಿಧ ಕಾರ್ಯಕ್ರಮಗಳು ಹಾಗೂ ಬಂಟಿಂಗ್ಸ್ ವಿಚಾರದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದು ಪೊಲೀಸರಿಗೆ ತಲೆನೋವಾಗಿತ್ತು. ಚತುಷ್ಪಥ ಹೆದ್ದಾರಿಯಾಗಿ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೃತ್ತ ತೆರವುಗೊಂಡಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ವೃತ್ತದ ನೆಲಸಮಗೊಳಿಸುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ದಿವಾಕರ ಪಿ.ಎಂ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಡುವೆ ಕಾರ್ಯಾಚರಣೆ ಪೂರ್ಣಗೊಂಡಿತು.
