Ankola| ಕಾಡಿನಲ್ಲಿ ಹುಲಿ ಗಣತಿಗಾಗಿ ಅಳವಡಿಸಿದ್ದ ಎರಡು ಕ್ಯಾಮೆರಾಗಳನ್ನು ಕಳ್ಳರು ಎಗರಿಸಿಕೊಂಡ ಹೋದ ಘಟನೆ ತಾಲೂಕಿನ ಹೊಸಕಂಬಿ ಅರಣ್ಯ ವ್ಯಾಪ್ತಿಯ ಮಾಣಿಕಾರ ತಿಂಗಳಬೈಲ್ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರ: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳು, 36 ವನ್ಯಜೀವಿ ಧಾಮಗಳು ಮತ್ತು ಅರಣ್ಯ ವಿಭಾಗಗಳಲ್ಲಿ ಅಖಿಲ ಭಾರತ ಹುಲಿ ಗಣತಿ (All India Tiger Estimation) ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಹುಲಿ ಕಾರಿಡಾರ್‌ಗಳ ಹೊರಗೂ ವನ್ಯಜೀವಿಗಳನ್ನು ಮತ್ತು ಮಾಂಸಾಹಾರಿ ಪ್ರಾಣಿಗಳನ್ನು ಎಣಿಕೆ ಮಾಡಲಾಗುತ್ತಿದೆ. ಈ ಹುಲಿ ಗಣತಿ ಮೇ.1 ರಿಂದ ಆರಂಭವಾಗಿ ಮೇ. 25 ರವರೆಗೆ ನಡೆಯುತ್ತಿದೆ. ಈ ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್ ಕಾರ್ಯಚರಣೆಯನ್ನು ಸಮರ್ಪಕವಾಗಿ ಹಾಗೂ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಮೇ. 1 ರಂದು ಹೊಸಕಂಬಿ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದ ಮಾಣಿಕಾರ ತಿಂಗಳಬೈಲ್ ಅರಣ್ಯ ವ್ಯಾಪ್ತಿಯಲ್ಲಿ’ಕಡಿಬ್ಯಾಕ್` (Cuddeback) ಕಂಪನಿಯ ಸುಮಾರು 25 ಸಾವಿರ ಮೌಲ್ಯದ ಎರಡು ಆಪ್‌ಲೈನ್ ಕ್ಯಾಮೇರಾಗಳನ್ನು ಅಳವಡಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ಐದು ದಿನಕ್ಕೊಮ್ಮೆ ಆ ಕ್ಯಾಮೇರಾದ ಮೇಮೋರಿ ಕಾರ್ಡನ್ನು ತೆಗೆದು ಅದಕ್ಕೆ ಬೇರೆ ಕಾರ್ಡ ಅಳವಡಿಸಿ ತೆಗೆದ ಕಾರ್ಡನ್ ಡೇಟಾವನ್ನು ಪಾರೆಸ್ಟ್ ಕಛೇರಿಯ ಕಂಪ್ಯೂಟರ್‌ನಲಿ ಸಂಗ್ರಹಿಸಿಡುತ್ತಿದ್ದರು. ಅದರಂತೆ ಮೇ.11 ರವರೆಗೆ ಸಿಬ್ಬಂದಿಗಳು ಕ್ಯಾಮೆರಾ ಡಾಟಾ ಸಂಗ್ರಹಿಸಿದ್ದಾರೆ.
ಆದರೆ ಮೇ. 13ಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಕ್ಯಾಮೆರಾಗಳು ನಾಪತ್ತೆಯಾಗಿದೆ. ಬಹುಶಃ ಕಾಡುಪ್ರಾಣಿಗಳೇ ಕ್ಯಾಮೆರಾ ಹೊತ್ತೊಯ್ದಿರಬಹುದೆಂದು ಸಿಬ್ಬಂದಿಗಳು ಕ್ಯಾಮೇರಾ ಅಳವಡಿಸಿದ ಜಾಗದ ಸುತ್ತಮುತ್ತಲು ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಇದು ಕಾಡು ಪ್ರಾಣಿಗಳ ಕೆಲಸವಾಗಿರದೇ `ನಾಡು ಪ್ರಾಣಿ’ಗಳದೇ ಕೆಲಸ ಎಂದು ತಿಳಿದು, ಹಿಲ್ಲೂರು ಉಪ ವಲಯ ಅರಣ್ಯಾಧಿಕಾರಿಯಾದ ರಾಘವೇಂದ್ರ ಜಿರಗಾಳೆ ಇವರು ಅಂಕೋಲಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಕ್ಯಾಮರಾ ಕಳ್ಳರ ತನಿಖೆ ಕೈಗೊಂಡಿದ್ದಾರೆ.
