Karwar| ತನ್ನ ಮೂರು ಎಕರೆ ಖಾಸಗಿ ಜಮೀನಿಗೆ ದಾರಿ ಮಾಡಿಕೊಡುವ ದುರುದ್ದೇಶದಿಂದ ಹಳೆಯ ಬಸ್ ಸ್ಟಾಪ್ ಸ್ಥಳಾಂತರಿಸಿ, ಹಿಂದು ಹೈಸ್ಕೂಲ್ ‌ಬಳಿಯ ಫುಟ್ ಪಾತ್ ಮೇಲೆ‌ ನೂತನ ಬಸ್ ಸ್ಟಾಪ್ ನಿರ್ಮಾಣಕ್ಕೆ ಶಾಸಕ ಸತೀಶ ಸೈಲ್ ಒತ್ತಡ ಹಾಕಿದ್ದಾರೆ‌ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.

ಅವರು ಹಿಂದು ಹೈಸ್ಕೂಲ್ ಬಳಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಸ್ ಸ್ಟಾಪ್ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಜನ ಓಡಾಡುವ ಜಾಗದಲ್ಲಿ ಹಿಂದು ಮುಂದು ವಿಚಾರಿಸದೆ ಕಾರವಾರ ನಗರಸಭೆಯವರು ಫುಟ್ ಪಾತ್ ಮೇಲೆ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ ಶಾಸಕ ಸತೀಶ್ ಸೈಲ್ ಅವರ ಕುಮ್ಮಕ್ಕೆ ಕಾರಣ ಎಂದು ಆರೋಪಿಸಿದರು.

ಹತ್ತಿರದಲ್ಲೇ ನೂರು ಮೀಟರ್ ದೂರದಲ್ಲೇ ಹಳೆಯ ಪ್ರಯಾಣಿಕರ ತಂಗುದಾಣ ಇದೆ. ಆದರೆ ಶಾಸಕ ಸೈಲ್ ಆ ತಂಗುದಾಣದ ಹಿಂದೆ ಇರುವ ತಮ್ಮ ಮೂರು ಎಕರೆ ಖಾಸಗಿ ಜಮೀನಿಗೆ ದಾರಿ ಮಾಡಿ ಕೊಡುವ ಉದ್ದೇಶದಿಂದ ಅದನ್ನು ತೆರವುಗೊಳಿಸಿ, ಪುಟಪಾತ್ ಮೇಲೆ ಬಸ್ ಸ್ಟಾಪ್ ನಿರ್ಮಾಣಕ್ಕೆ ನಗರಸಭೆಯ ಮೇಲೆ ಒತ್ತಡ ಹಾಕಿದ್ದಾರೆ‌ ಎಂದು ಆರೋಪಿಸಿದರು.

ಸೈಲ್ ಮನೆಯಲ್ಲಿ ಆರಾಮ ಇರಬೇಕು: ಯಾವ ಕಾರಣಕ್ಕೂ ಶಾಲೆ ಬಳಿಯ ಪುಟಪಾತ್ ಮೇಲೆ ಬಸ್ ಸ್ಟಾಪ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ ರೂಪಾಲಿ ನಾಯ್ಕ, ಶಾಸಕ ಸತೀಶ ಸೈಲ್ ಅನಾರೋಗ್ಯ ಎಂದು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಅವರು ಮನೆಯಲ್ಲಿ ಆರಾಮ ಇರಬೇಕು. ಅದು ಬಿಟ್ಟು ಇಂಥ ಎಡಬಿಡಂಗಿ ಕೆಲಸ ಮಾಡುವುದನ್ನು ಮೊದಲು ಬಿಡಲಿ ಎಂದು ಕಿವಿ ಮಾತು ಹೇಳಿದರು.

ಆಯುಕ್ತರಿಗೆ ರೂಪಾಲಿ ಭರವಸೆ: ನೂತನ ಬಸ್ ಸ್ಟಾಪ್ ಸ್ಥಳಕ್ಕೆ ನಗರಸಭೆ ಆಯುಕ್ತ ಜಗದೀಶ ಹುಲಿಗೆಜ್ಜೆಯನ್ನು ಕರೆಯಿಸಿದ ಮಾಜಿ ಶಾಸಕಿ ರೂಪಾಲಿ‌ ನಾಯ್ಕ, ಪುಟಪಾತ್ ಮೇಲೆ ಬಸ್ ಸ್ಟಾಪ್ ಮಾಡುವುದು ಸುರಕ್ಷಿತವೇ? ನಾಳೆ ಏನಾದರೂ ದುರ್ಘಟನೆ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ನಗರಸಭೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಿರಿ ಎಂದು ಆಯುಕ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರೂಪಾಲಿ ನಾಯ್ಕ, ನಿಮ್ಮ ಬಗ್ಗೆ ಹೆಮ್ಮೆ, ಗೌರವ ಇದೆ. ಮುಂದೆ ನಮ್ಮ ಸರ್ಕಾರ ಬಂದಾಗ‌ ನಿಮ್ಮನ್ನೇ ಆ ಹುದ್ದೆಗೆ ಮುಂದುವರೆಸುವ ಅಭಯ ನೀಡಿದರು. ಆದರೆ ಯಾವ ಕಾರಣಕ್ಕೂ ಶಾಸಕರ ಒತ್ತಡಕ್ಕೆ ಮಣಿದು ಬಸ್ ಸ್ಟಾಪ್ ನಿರ್ಮಾಣ ಮಾಡದಂತೆಯೂ ಕಿವಿಮಾತು ಹೇಳಿದರು.

ಒಟ್ಟಾರೆ, ಒಂದು ಬಸ್‌ ಸ್ಟಾಪ್ ವಿಚಾರ ಇದೀಗ ಕಾರವಾರದಲ್ಲಿ ಹಾಲಿ ಮತ್ತು ಮಾಜಿ ನಡುವಿನ ರಾಜಕೀಯ ಸಮರಕ್ಕೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.