Karwar| ಕರಾವಳಿ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ಭಾಗದಲ್ಲಿ ಕಾಣಿಸಿಕೊಳ್ಳುವ ತೀವ್ರ ಬಿಸಿಗಾಳಿ, ಈ ಬಾರಿ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್ ಆರಂಭದಲ್ಲೇ ಅನುಭವವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ , ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಸೇರಿ ಒಂಬತ್ತು ಜಿಲ್ಲೆಗಳ ಕಚೇರಿ ಕೆಲಸದ ವೇಳಾಪಟ್ಟಿಯನ್ನು ಏಪ್ರಿಲ್ ಮತ್ತು ಮೇ ಎರಡು ತಿಂಗಲು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ ಕರಾವಳಿಯಲ್ಲೂ ಸಹ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕರಾವಳಿ ಪ್ರದೇಶಗಳು ಕಾದ ಬಾಣಲೆಯಂತಾಗುತ್ತಿವೆ. ಮಧ್ಯಾಹ್ನ ವೇಳೆಯಲ್ಲಿ ರಸ್ತೆಗಳಲ್ಲಿ ಸಂಚಾರ ಕಡಿಮೆಯಾಗಿದ್ದು, ಜನರು ಅಗತ್ಯವಿದ್ದರೆ ಮಾತ್ರ ಹೊರಗೆ ಬರುತ್ತಿದ್ದಾರೆ. ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರು ತೀವ್ರ ಬಿಸಿಲಿನ ನಡುವೆ ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ, ಉತ್ತರ ಒಳನಾಡಿನ ಭಾಗಗಳಲ್ಲಿ ಅನುಸರಿಸುತ್ತಿರುವಂತೆ ಕರಾವಳಿಯಲ್ಲೂ ಸಹ ಕಚೇರಿ, ಬ್ಯಾಂಕ್, ಶಾಲೆ ಮತ್ತು ಕಾಲೇಜುಗಳ ಸಮಯವನ್ನು ಬದಲಾಯಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಬೆಳಿಗ್ಗೆ ಬೇಗ ಕಾರ್ಯಾರಂಭ ಮಾಡಿ ಮಧ್ಯಾಹ್ನದ ತೀವ್ರ ಬಿಸಿಲನ್ನು ತಪ್ಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರೋಗ್ಯ ತಜ್ಞರು ಕೂಡ ಬಿಸಿಲಿನ ತೀವ್ರತೆಗೆ ಎಚ್ಚರಿಕೆ ನೀಡಿದ್ದು, ಅಗತ್ಯವಿಲ್ಲದೆ ಹೊರಗೆ ಹೋಗುವುದನ್ನು ತಪ್ಪಿಸಲು, ಸಾಕಷ್ಟು ನೀರು ಸೇವಿಸಲು ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಸಲಹೆ ನೀಡಿದ್ದಾರೆ. ಸ್ಥಳೀಯ ಆಡಳಿತವು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
