Hubli| ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಭರತ್ ಕುಮಾರ್ ಹೆಗ್ಗಡೆ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಆರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಯನ್ನು ಬಂಧಿಸಲಾಗಿದೆ.

ಅಂಕೋಲಾ ಮೂಲದ ವಿಶ್ವಜಿತ್ ನಾಯಕ ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ. 2019ರಲ್ಲಿ ಎಂಟು ಟಿಪ್ಪರ್ ವಾಹನಗಳನ್ನು ಖರೀದಿಸಿದ್ದ ವಿಶ್ವಜಿತ್ ನಾಯಕ್ ಅವರಿಗೆ ಸುಮಾರು 60 ಲಕ್ಷ ರೂಪಾಯಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭ್ಯವಾಗಿದ್ದು, ಅದರಲ್ಲಿ 34 ಲಕ್ಷ ರೂಪಾಯಿ ಕ್ರೆಡಿಟ್ ಪಡೆದುಕೊಂಡಿದ್ದರು. ಆದರೆ, ಈ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕಾನೂನುಬಾಹಿರವಾಗಿ ಪಡೆದಿರುವುದಾಗಿ ವಾಣಿಜ್ಯ ತೆರಿಗೆ ಇಲಾಖೆ ಆರೋಪಿಸಿ ಪ್ರಕರಣ ದಾಖಲಿಸಿತ್ತು.

ಈ ಪ್ರಕರಣ ಸಂಬಂಧ ನಾಲ್ಕು ಬಾರಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದ್ದು, ಐದನೇ ಬಾರಿ ವಿಚಾರಣೆಗೆ ಬರಲು ಹೇಳಲಾಗಿತ್ತು. ಇದೇ ವೇಳೆ ಪ್ರಕರಣ ಮುಚ್ಚಲು ಆರು ಲಕ್ಷ ರೂಪಾಯಿ ಲಂಚ ನೀಡುವಂತೆ ಆರೋಪಿತ ಅಧಿಕಾರಿ ಒತ್ತಾಯಿಸಿದ್ದರೆಂದು ತಿಳಿದುಬಂದಿದೆ.

ವಿಚಾರಣೆಗೆ ಹಾಜರಾದ ವೇಳೆ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ರಾಜು ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.