Karwar| ‘ರೀಲ್ಸ್ ಅಜ್ಜಿ’ ಖ್ಯಾತಿಯ ಯಲ್ಲಾಪುರದ ಮಂಚಿಕೇರಿಯ ಲಕ್ಷ್ಮಿ ನಾಯ್ಕ (93) ನಿಧನರಾಗಿದ್ದಾರೆ. ತನ್ನ‌ ಇಳಿವಯಸ್ಸಿನಲ್ಲೂ ಸರಿಯಾಗಿ ಕಿವಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ಸಹ ತನ್ನ ಮೊಮ್ಮಗ ಹೇಳಿಕೊಟ್ಟಂತೆ ನಟಿಸುವ ಮೂಲಕ ‘ರೀಲ್ಸ್’ ಗಳಲ್ಲಿ ಮಿಂಚುತ್ತಿದ್ದ ಅಜ್ಜಿ ಇನ್ನು‌ ನೆನಪು ಮಾತ್ರ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಿವಾಸಿಯಾಗಿದ್ದ ಇವರು ಸುಮಾರು 93 ವರ್ಷ ವಯಸ್ಸಾಗಿದ್ದರೂ ಸಹ ತನ್ನ ಮರಿಮೊಮ್ಮಗ ಡ್ರಾಮಾ ಜೂನಿಯರ್ಸ್ ಸೂರಜ್ ಜೊತೆ ಲೆಕ್ಕವಿಲ್ಲದಷ್ಟು ರಿಲ್ಸ್ ಮಾಡೋ ಮೂಲಕ ರಾಜ್ಯದ ಜನರ ಗಮನಸೆಳೆಯುವಂತೆ ಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್ ಅಜ್ಜಿ’ ಎಂದೇ ಮನೆಮಾತಾಗಿದ್ದರು. ರೀಲ್ಸ್ ಮೂಲಕವೇ ಲಕ್ಷಾಂತರ ಮಂದಿಯ ಫಾಲೋವರ್ಸ್ ಹೊಂದಿದ್ದರು. ಅಜ್ಜಿ ಮೊಮ್ಮಗ ಜೋಡಿ ಕೇವಲ ಉತ್ತರಕನ್ನಡ ಜಿಲ್ಲೆಯಲ್ಲಿ ಅಷ್ಟೆ ಅಲ್ಲದೇ ರಾಜ್ಯಾದ್ಯಂತ ರೀಲ್ಸ್ ಮಾಡಿ ಚಿರಪರಿಚಿತರಾಗಿದ್ದರು

ಲಕ್ಷ್ಮಿ ನಾಯ್ಕ ಅವರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ‘ರೀಲ್ಸ್ ಅಜ್ಜಿ’ಗೆ ಸಂತಾಪ ಸೂಚಿಸುತ್ತಿದ್ದಾರೆ.