Karwar| ಕಾರವಾರ – ಅಂಕೋಲಾ‌ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ನೀಡಿರುವ ‌ಹೇಳಿಕೆ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.

ಕಾರವಾರದಲ್ಲಿ ನಡೆದ ಜೆಡಿಎಸ್ ನ ಕಾರ್ಯಕಾರಿಣಿಯಲ್ಲಿ ಅಸ್ನೋಟಿಕರ್, ತಮ್ಮ ಚುನಾವಣೆಯ ಸ್ಪರ್ಧೆಯ ಬಗ್ಗೆ ಮಾತನಾಡಿ, ಈ ಬಾರಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದರು.

ಜಿಲ್ಲೆಯಲ್ಲಿ ಜೆಡಿಎಸ್ ಗೆ ಹೇಳಿಕೊಳ್ಳುವಂಥ ಗಟ್ಟಿಯಾದ ಅಡಿಪಾಯ, ವೋಟ್ ಬ್ಯಾಂಕ್‌ ಇಲ್ಲ. ಕಳೆದ ಬಾರಿ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ಸೋನಿ, ವೈಯಕ್ತಿಕ ವರ್ಚಸ್ಸು ಮತ್ತು ಒಂದಿಷ್ಟು ಕಾಂಗ್ರೆಸ್ ನೆಗೆಟಿವ್ ಮತಗಳು ಶಿಫ್ಟ್ ಆದ ಪರಿಣಾಮ ಕುಮಟಾ ಕ್ಷೇತ್ರದಲ್ಲಿ ಸಣ್ಣ ಅಂತರದಲ್ಲಿ ಬಿಜೆಪಿಯ ದಿನಕರ‌ ಶೆಟ್ಟಿ ಎದುರು ಸೋಲನ್ನನುಭವಿಸಿದ್ದರು. ಹೇಳಿ ಕೇಳಿ ಕುಮಟಾ ಹಾಗೂ ಭಟ್ಕಳ ಕ್ಷೇತ್ರ ಹಿಂದುತ್ವದ ಗಟ್ಟಿ ನೆಲೆ. ಸಂಘ ಪರಿವಾರ ಯಾವ ಕಾರಣಕ್ಕೂ ಈ ಎರಡೂ ಕ್ಷೇತ್ರ ಮೈತ್ರಿ ಪಾಲಾಗಲು ಒಪ್ಪಲ್ಲ. ಇನ್ನು ಶಿರಸಿ, ಹಳಿಯಾಳ, ಯಲ್ಲಾಪುರ ಜೆಡಿಎಸ್ ಗೆ ಗಟ್ಟಿ ನಾಯಕತ್ವವೂ ಇಲ್ಲ. ಕನಿಷ್ಠ ಬ್ಯಾನರ್ ಕಟ್ಟಲು ಸಹ ಕಾರ್ಯಕರ್ತರು ಇಲ್ಲದ ಪರಿಸ್ಥಿತಿ.

ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಸೀಟ್ ನೀಡಲೇಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಲ್ಲಿ, ಕೊನೆಯದಾಗಿ ಬಿಜೆಪಿ ನಾಯಕತ್ವ ಕಾರವಾರ ಕ್ಷೇತ್ರ ಬಿಟ್ಟು ಕೊಡಬಹುದು ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನಿಸಿ ವಿಫಲರಾಗಿರುವ ಅಸ್ನೋಟಿಕರ್, ಬಿಜೆಪಿಯ ಕೆಲ ‘ಹಿರಿಯರ ಸಲಹೆ’ ಮೇರೆಗೆ ಕೊನೆಗೆ ಜೆಡಿಎಸ್ ನಿಂದಲೇ ಸ್ಪರ್ಧಿಸುವ ಗಟ್ಟಿ ಮನಸ್ಸು ಮಾಡಿದ್ದಾರೆನ್ನಲಾಗಿದೆ.

ಜಿಲ್ಲೆಯ ರಾಜಕಾರಣದಿಂದ ಅನಂತಕುಮಾರ ಹೆಗಡೆ ದೂರ ಸರಿದ ನಂತರ, ಸಂಸದ ವಿಶ್ವೇಶ್ವರ ಹೆಗಡೆ ಜಿಲ್ಲೆಯ ಬಿಜೆಪಿಯಲ್ಲಿನ ತನ್ನ ಹಿಡಿತ ಬಿಗಿಗೊಳಿಸಿದ್ದಾರೆ. ಅತ್ಯಂತ ಚಾಣಾಕ್ಷ ರಾಜಕಾರಣಿಯಾಗಿರುವ ಕಾಗೇರಿ, ಎಂದಿಗೂ ರಾಜಕೀಯದಲ್ಲಿ ತನ್ನನ್ನು ‘ಓವರ್ ಟೇಕ್’ ಮಾಡುವವರಿಗೆ ಅವಕಾಶ ನೀಡರು. ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರು ಹೇಳುವಂತೆ, ಕಾಗೇರಿ ಮನಸ್ಸಿನಲ್ಲಿರುವುದು ಒಂದು, ಹೇಳುವುದು ಇನ್ನೊಂದು, ಕೊನೆಗೆ ಮಾಡುವುದೇ ಮತ್ತೊಂದು.

ಹೆಸರು ಬಹಿರಂಗ ಪಡಿಸದ ಷರತ್ತಿನೊಂದಿಗೆ Newswaveskannada.com ಜೊತೆ ಮಾತನಾಡಿದ ಬಿಜೆಪಿಯ ಪ್ರಮುಖರೊಬ್ಬರು, ಮಾಜಿ‌ ಶಾಸಕಿ ರೂಪಾಲಿ ನಾಯ್ಕ ಉತ್ತಮವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರ ಸಂಘಟನಾ ಶಕ್ತಿ, ಪಕ್ಷನಿಷ್ಠೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಚುನಾವಣೆ ಸಮಯದಲ್ಲಿ ಕಾರ್ಯಕರ್ತರ ಅಭಿಪ್ರಾಯ, ಸಂಘಟನೆ ಹಾಗೂ ‘ಮೈತ್ರಿ ಧರ್ಮ’ ಇವೆಲ್ಲವನ್ನು ಅವಲೋಕಿಸಿಯೇ ಟಿಕೆಟ್ ಹಂಚಿಕೆ ಮಾಡುವುದು ಅನಿವಾರ್ಯ ಎಂಬ ಮಾತು, ಬಿಜೆಪಿಯೊಳಗೆ ‘Something is Cooking’ ಎಂಬ ಅನುಮಾನ ಹೆಚ್ಚಿಸಿದ್ದಂತೂ ಸುಳ್ಳಲ್ಲ.

‘There is a gap between tea cup and lips’ ಎನ್ನುವಂತೆ ರಾಜಕೀಯದಲ್ಲಿ‌ ಕೊನೆ ಕ್ಷಣದವರೆಗೆ ಏನೂ ಸಾಧ್ಯವಾಗಬಹುದು. ಸಂಘಟನೆ, ಪಕ್ಷ ನಿಷ್ಠೆ ಇವೆಲ್ಲವನ್ನೂ ಬದಿಗೆ ಇರಿಸಿ, ಕೊನೆಗೆ ಯಾರೆಲ್ಲ ರಾಜಕೀಯವಾಗಿ ಬೆಳೆದರೆ ಏನೆಲ್ಲಾ ತೊಂದರೆ‌ ಎಂಬುದನ್ನು ವಿಶ್ಲೇಷಿಸಿ, ನಿರ್ಣಯ ಕೈಗೊಳ್ಳಲಾಗುತ್ತದೆ ಎಂಬ ಮಾತು ಸುಳ್ಳಲ್ಲ.

ಇನ್ನು ಈ ವರ್ಷದ ಕೊನೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ‌ಬದಲಾವಣೆಗೆ ಕೇಂದ್ರ ನಾಯಕತ್ವ‌ ಮುಂದಾಗುತ್ತಿದೆ. ರಾಜ್ಯ ನಾಯಕತ್ವವನ್ನು OBC ಗೆ ನೀಡುವ ಗಂಭೀರ ಚಿಂತನೆಯಲ್ಲಿದೆ. ಇದಾದರೆ, ಯಡಿಯೂರಪ್ಪ ಕ್ಯಾಂಪ್ ನಲ್ಲಿರುವ ರೂಪಾಲಿ‌ ನಾಯ್ಕಗೆ ಬಹು ದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ. ಇದಲ್ಲದೇ‌ ಭ್ರಷ್ಟಾಚಾರ ಸೇರಿದಂತೆ ಪಕ್ಷದೊಳಗಿನ ಅಸಮಾಧಾನದಿಂದ ಗೋವಾದಲ್ಲಿ ಸಿಎಂ ಫೇಸ್ ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ. ಈ ಎರಡು ಬದಲಾವಣೆಯಾದರೆ, ರೂಪಾಲಿ ನಾಯ್ಕ ರಾಜಕೀಯದಲ್ಲಿ ‘God Father’ ಗಳನ್ನು ಕಳೆದುಕೊಂಡು‌ ತೀವ್ರ ಹಿನ್ನಡೆ ಅನುಭವಿಸಲಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇನ್ನು ರೂಪಾಲಿ ನಾಯ್ಕಗೆ ಹೊರಗಿನ ಶತ್ರುಗಳಿಗಿಂತ ಪಕ್ಷದೊಳಗಿನ ‘ಹಿತಶತ್ರು’ಗಳ ಕಾಟ ಹೆಚ್ಚಿದೆ. ನಿಧಾನವಾಗಿ ಈ ಹಿತಶತ್ರುಗಳು ರೂಪಾಲಿ ಸುತ್ತ‌ ‘ರಣವೂಹ್ಯ’ ರಚಿಸುತ್ತಿದ್ದಾರೆ. ಬಿಜೆಪಿಯಲ್ಲಿ ಅತ್ಯಂತ ‘Charismatic Leader’ ಆಗಿ ಬೆಳೆದಿರುವ ಅವರು ಈ ‘ಹಿತಶತ್ರು’ಗಳ ರಣವೂಹ್ಯ ಭೇದಿಸಿ, ಬಿಜೆಪಿ‌ ಟಿಕೆಟ್ ತರಲು ಯಶಸ್ವಿಯಾಗುತ್ತಾರೆಯೇ‌ ಎಂಬುದನ್ನು ಚುನಾವಣೆಯವರೆಗೆ ಕಾದು ನೋಡಬೇಕಿದೆ ಅಷ್ಟೇ.