Karwar| ತನ್ನ ಮೇಲಿನ ಹಲ್ಲೆಗೆ ಹಲ್ಲೆಗೆ ಸಹಕಾರಿ ಕ್ಷೇತ್ರದ ದ್ವೇಷವೇ ಕಾರಣ ಎಂದು ಕಾಂಗ್ರೆಸ್ ಧುರೀಣ ಗೋಪಾಲಕೃಷ್ಣ ನಾಯಕ ನೇರವಾಗಿ ಆರೋಪಿಸಿದ್ದಾರೆ.
ಮೊನ್ನೆ ಸೋಮವಾರ ಅಂಕೋಲಾದ ಕಣಕಣೇಶ್ವರ ದೇವಸ್ಥಾನ ಬಳಿ ಸುಮಾರು ಆರು ದುಷ್ಕರ್ಮಿಗಳು ಕಾಂಗ್ರೆಸ್ ಧುರೀಣ ಗೋಪಾಲಕೃಷ್ಣ ನಾಯಕ ಮೇಲೆ ರಾಡ್, ಚಾಕು ಬಳಸಿ ಹಲ್ಲೆ ನಡೆಸಿದ್ದರು. ದಾಳಿಯಲ್ಲಿ ಗೋಪಾಲಕೃಷ್ಣ ನಾಯಕ್ ಪಕ್ಕದಲ್ಲಿದ್ದ ಬ್ಯಾಂಕ್ ಒಳಗಡೆ ನುಗ್ಗಿ ತಮ್ಮ ಜೀವ ರಕ್ಷಣೆ ಮಾಡಿಕೊಂಡಿದ್ದರು.
ನಂತರ ಹಲ್ಲೆಕೊರರಲ್ಲಿ ನಾಲ್ವರನ್ನು ಗೋವಾಕ್ಕೆ ಪರಾರಿಯಾಗುವಾಗ ಮಾಜಾಳಿ ಚೆಕ್ ಪೊಸ್ಟ್ ಬಳಿ ಪೋಲಿಸರು ಬಂಧಿಸಿದ್ದರು.
ಹಲ್ಲೆಗೊಳಗಾದ ಗೋಪಾಲಕೃಷ್ಣ ನಾಯಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಕಾರವಾರಕ್ಕೆ ಆಗಮಿಸಿದ ಗೋಪಾಲಕೃಷ್ಣ ನಾಯಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ನ ಮೇಲಿನ ಹಲ್ಲೆಗೆ ಸಹಕಾರಿ ಕ್ಷೇತ್ರದ ರಾಜಕೀಯವೇ ಕಾರಣ ಎಂದು ಆರೋಪಿಸಿದರು.
ಇತ್ತೀಚೆಗೆ ಅಂಕೋಲಾದ ಟಿಎಂಎಸ್ ಸೊಸೈಟಿಗೆ ನಡೆದ ಚುನಾವಣೆಯಲ್ಲಿ ತನ್ನ ಏಳು ಸದಸ್ಯರು ಗೆದ್ದಿದ್ದರು. ಅಂದು ಚುನಾವಣೆಯ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ದಿವಂಗತ ಆರ್.ಎನ್.ನಾಯಕ ಪುತ್ರ ಮಯೂರ ನಾಯಕ ಚುನಾವಣೆ ಗೆಲ್ಲಲು ಸಾಕಷ್ಟು ಬಲವಂತದ ಪ್ರಯತ್ನ ಮಾಡಿದ್ದರು. ಅದನ್ನು ತಾನು ವಿಫಲಗೊಳಿಸಿದ್ದೇ ಎಂದರು.
ಇನ್ನು ಈ ಸೊಸೈಟಿ ಚುನಾವಣೆಯಲ್ಲಿ ಶಾಸಕ ಸತೀಶ ಸೈಲ್ ಅವರು ಮಯೂರ ನಾಯಕ ಅವರಿಗೆ ತನ್ನ ವಿರುದ್ದ ಬೆಂಬಲಿಸಿದ್ದರು ಎಂದು ಆರೋಪಿಸಿದ ಅವರು, ಸೈಲ್ ಅವರು ಇರೋದು ಕಾಂಗ್ರೆಸ್ ಪಕ್ಷದಲ್ಲಿ. ಮಯೂರ ನಾಯಕ ಇರುವುದು ಬಿಜೆಪಿಯಲ್ಲಿ ಎಂದರು.
ತನ್ನ ಮತ್ತು ಶಾಸಕ ಸತೀಶ ಸೈಲ್ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಒಪ್ಪಿಕೊಂಡ ಅವರು, ಈ ಘಟನೆಯ ಹಿಂದೆ ಶಾಸಕ ಸೈಲ್ ಇಲ್ಲ. ಆದರೆ ಈ ಘಟನೆಯ ಹಿಂದೆ ಇರುವವರಿಗೆ ಸೈಲ್ ಬೆಂಬಲ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂದು ಗೋಪಾಲಕೃಷ್ಣ ಹೇಳಿದರು.
ಕಳೆದ ಬಾರಿ ಶಿರೂರು ಗುಡ್ಡ ದುರಂತದ ಸಂದರ್ಭದಲ್ಲಿ ಅಂಕೋಲಾಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಆಗ ಸಿಎಂ ಅವರು ನನ್ನ ಮನೆಗೆ ಬಂದಾಗ ಸೈಲ್ ಅದನ್ನು ಆಕ್ಷೇಪಿಸಿ, ತಾನು ರಾಜೀನಾಮೆ ಬೆದರಿಕೆ ಹಾಕಿದ್ದರು ಎಂಬುದನ್ನು ನೆನಪಿಸಿದ ಗೋಪಾಲಕೃಷ್ಣ ನಾಯಕ, ಆಗ ತಾನೂ ಸಿಎಂ ಅವರಿಗೆ ನೀವು ಸಿಎಂ ಆಗಬೇಕೆಂದು ತಾವೆಲ್ಲರೂ ಸತೀಶ ಸೈಲ್ ಅವರನ್ನು ಗೆಲ್ಲಿಸಿದ್ವಿ ಎಂದು ಹೇಳಿದ್ದೇ ಎಂದರು.
ಇನ್ನು ತಾನು ಆಸ್ಪತ್ರೆಯಲ್ಲಿದ್ದಾಗ ಮಾಜಿ ಸಚಿವ ಆನಂದ ಅಸ್ನೋಟಿಕರ್, ಸಹೋದರಿ ಸಮಾನಳಾದ ಮಾಜಿ ಶಾಸಕಿ ರೂಪಾಲಿ ನಾಯ್ಕ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದರು.
ಆದರೆ ಶಾಸಕ ಸೈಲ್ ಏನೂ ಫೋನ್ ಮಾಡಿದ್ದು ಗೊತ್ತಿಲ್ಲ. ಬಹುಶಃ ಅವರು ತಾವೇ ತಂದ ಡಿವೈಎಸ್ಪಿ, ಅಂಕೋಲಾ ಸಿಪಿಐ ಹಾಗೂ ಪಿಎಸ್ಸೈ ಅವರಿಗೆ ಫೋನ್ ಮಾಡಿರಬಹುದು ಎಂದು ವ್ಯಂಗವಾಡಿದರು.
