Kumta| ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರವಾಗಿದ್ದು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಮಟಾದ ಅಳ್ವೆಕೋಡಿಯಲ್ಲಿರುವ ಟೋಟಲ್ ಗ್ಯಾಸ್ ಏಜನ್ಸಿ ಎದುರು ಸುಮಾರು ಎರಡು ಕಿಲೋಮೀಟರ್‌ವರೆಗೆ ಆಟೋ ರಿಕ್ಷಾಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.
ಅಳ್ವೆಕೋಡಿಯಿಂದ ಹೊನ್ನಾವರವರೆಗೆ ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿ ದೀರ್ಘ ಸಾಲಿನಲ್ಲಿ ಆಟೋಗಳು ನಿಂತಿದ್ದು, ಗ್ಯಾಸ್ ಪಡೆಯಲು ಚಾಲಕರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಸ್ಟಾಕ್ ಕೊರತೆಯಿಂದಾಗಿ ವಿತರಕರು ಗ್ಯಾಸ್ ಮಾರಾಟಕ್ಕೆ ನಿರ್ಬಂಧ ವಿಧಿಸಿದ್ದು, ಪ್ರತಿ ವಾಹನಕ್ಕೆ ₹500 ಮೌಲ್ಯದ ಗ್ಯಾಸ್ ಮಾತ್ರ ನೀಡಲಾಗುತ್ತಿದೆ. ಜೊತೆಗೆ, ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಗ್ಯಾಸ್ ವಿತರಣೆ ಮಾಡಲಾಗುತ್ತಿದೆ.
ಇನ್ನೊಂದೆಡೆ, ಗ್ಯಾಸ್ ಬೆಲೆ ಏರಿಕೆಯೂ ಚಾಲಕರ ಮೇಲೆ ಹೊರೆ ಹೆಚ್ಚಿಸಿದೆ. ಈ ಮೊದಲು ಪ್ರತಿ ಕೆಜಿ ₹60 ಇದ್ದ ಗ್ಯಾಸ್ ದರ ಈಗ ₹80ಕ್ಕೆ ಏರಿಕೆಯಾಗಿದೆ. ಇದರಿಂದ ದಿನನಿತ್ಯದ ಆದಾಯದ ಮೇಲೆ ಪರಿಣಾಮ ಬಿದ್ದಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಗ್ಯಾಸ್ ಸರಬರಾಜು ಸುಧಾರಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
