ಕಾರವಾರ: ‘ಬಾರ್ಡರ್ ಖುಲ್ಲಾ ಹೈ… ಚೌಕಿದಾರ್ ಕಹಾಂ ಹೈ?… ಕ್ಯಾ ಕರ್ ರಹೇ ಹೋ?’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಉದ್ದೇಶಿಸಿ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ವ್ಯಂಗ್ಯವಾಡಿದರು.
ಕಾರವಾರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಗಡಿ ಭದ್ರತೆ ಮತ್ತು ಅಕ್ರಮ ನುಸುಳುಕೋರರ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅಕ್ರಮ ವಲಸಿಗರ ಬಗ್ಗೆ ದಿನವೂ ಬೊಬ್ಬೆ ಹಾಕುವ ಬಿಜೆಪಿ ನಾಯಕರು, ಮೊದಲು ದೇಶದ ಗಡಿಯನ್ನು ಸುರಕ್ಷಿತವಾಗಿಡುವ ಹೊಣೆ ಯಾರದ್ದು ಎಂಬುದನ್ನು ಜನರಿಗೆ ಹೇಳಲಿ. ನುಸುಳುಕೋರರನ್ನು ತಡೆಯುವುದು ರಾಜ್ಯ ಸರ್ಕಾರದ ಕೆಲಸವಲ್ಲ, ಕೇಂದ್ರ ಸರ್ಕಾರದ ಜವಾಬ್ದಾರಿ. ಹಾಗಿದ್ದರೆ ಗಡಿ ತೆರೆದಿಟ್ಟಿರುವವರು ಯಾರು? ‘ಚೌಕಿದಾರ್ ಎಲ್ಲಿದ್ದಾರೆ?’ ಎಂದು ಪ್ರಶ್ನಿಸಿದರು. ‘ಅಮಿತ್ ಷಾ ಜೀ… ಕಹಾಂ ಹೋ? ಬಾರ್ಡರ್ ಖುಲ್ಲಾ ಕರ್ಕೆ… ಚೌಕಿದಾರ್ ಕ್ಯಾ ಕರ್ ರಹೇ ಹೋ?’ ಎಂದು ಹಿಂದಿ ಮಾತುಗಳ ಮೂಲಕ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.
ಇದೇ ವೇಳೆ ಚುನಾವಣಾ ಆಯೋಗ, ಇಡಿ ಹಾಗೂ ಸಿಬಿಐ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕೋಟ್ಯಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿಸಲು ಯತ್ನ ನಡೆಯುತ್ತಿದೆ ಎಂದು ದೂರಿದರು.
ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಪ್ರಭಾವಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಎಲ್ಒಗಳೊಂದಿಗೆ ಮನೆಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆಗೆ ಸಹಕರಿಸುತ್ತಿದ್ದಾರೆ ಎಂದರು.
ಪ್ರತಿಯೊಬ್ಬ ನಾಗರಿಕರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಈಗಲೇ ಪರಿಶೀಲಿಸಬೇಕು. ನಾಳೆ ಹೆಸರು ಇಲ್ಲ ಎಂಬ ಕಾರಣಕ್ಕೆ ನಿಮ್ಮ ನಾಗರಿಕತ್ವವನ್ನೇ ಕೇಂದ್ರ ಸರ್ಕಾರ ಪ್ರಶ್ನಿಸುವ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
‘ಮೀನು ತಿನ್ನೋರೇ ಹುಷಾರ್!’
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಗದಿತ ಅವಧಿಗೂ ಮುನ್ನವೇ ಸುಮಾರು ಶೇ.75ರಷ್ಟು ಮತದಾರರ ನೋಂದಣಿ ಪೂರ್ಣಗೊಂಡಿರುವುದನ್ನು ಶ್ಲಾಘಿಸಿದ ಅಂಜಲಿ ನಿಂಬಾಳ್ಕರ್, ‘ಮೀನು ತಿನ್ನೋ ಮಂದಿ ತುಂಬಾ ಹುಷಾರ್ ಇರ್ತಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.
ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ವಿಷಯದಲ್ಲಿ ರಾಜಕಾರಣ ಬೇಡ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಮೊದಲು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಸಿಗುವಂತೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಸಾಯಿ ಗಾಂವ್ಕರ್, ರಾಮಾ ಮೊಗೇರ, ಆರ್. ಎಚ್. ನಾಯ್ಕ, ಸುಷ್ಮಾ ರಾಜಗೋಪಾಲ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
