Dandeli| ಯಾವುದೇ ಪರವಾನಗಿ ಅಥವಾ ಪಾಸ್-ಪರ್ಮಿಟ್ ಇಲ್ಲದೆ ಮಾದಕ ಅಂಶ ಹೊಂದಿರುವ ಶಂಕೆಯ ಉತ್ಪನ್ನವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದಡಿ ದಾಂಡೇಲಿ ನಗರ ಪೊಲೀಸರು ಹೋಲ್ ಸೇಲ್ ಅಂಗಡಿ ಮಾಲೀಕರೊಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ದಾಂಡೇಲಿಯ ಜೆ.ಎನ್. ರಸ್ತೆಯಲ್ಲಿರುವ ಎಸ್.ಕೆ. ಏಜೆನ್ಸಿ ಹೋಲ್ ಸೇಲ್ ಅಂಗಡಿಯಲ್ಲಿ ದಾಳಿ ನಡೆಸಿದ ಪೊಲೀಸರು, ಇಲ್ಲಿನ ನಿರ್ಮಲನಗರದ ಮುರಳಿಧರ ಮಹೇಶ್ವರಿ (62) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜುಲೈ 18ರಂದು ಮಧ್ಯಾಹ್ನ 1.10 ಗಂಟೆ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವೇಳೆ, “SANAN MEWA MODAK (SPECIAL)” ಎಂದು ನಮೂದಿಸಲಾಗಿದ್ದ ಚಿಕ್ಕ ರಟ್ಟಿನ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ವಸ್ತು ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುವಿನ ಒಟ್ಟು ತೂಕ 1 ಕೆಜಿ 986 ಗ್ರಾಂ (ಬಟ್ಟೆ ಸಮೇತ) ಎಂದು ತಿಳಿಸಲಾಗಿದೆ. ದಾಳಿ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸ್ಥಳ ಪರಿಶೀಲನಾ (SOCO) ಅಧಿಕಾರಿಗಳು ಪ್ರಾಥಮಿಕ ಪರೀಕ್ಷೆ ನಡೆಸಿದ್ದು, ವಶಪಡಿಸಿಕೊಂಡ ವಸ್ತುವಿನಲ್ಲಿ ಮಾದಕ ಅಂಶ ಇರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿ ನೀಡಿದ್ದಾರೆ. ಅಂತಿಮ ದೃಢೀಕರಣಕ್ಕಾಗಿ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸುವ ಸಾಧ್ಯತೆಯಿದೆ.
ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ವಸ್ತುಗಳ ನಿಯಂತ್ರಣ ಕಾಯ್ದೆ (NDPS Act, 1985) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
