Karwar| ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಐದು ವರ್ಷ ಆಡಳಿತ ಪೂರ್ಣಗೊಳಿಸುವ ನಂಬಿಕೆ ಕಳೆದುಕೊಂಡಿದ್ದು, ಒಂದೊಮ್ಮೆ ಸರ್ಕಾರ ಪತನವಾದರೆ, ಪ್ರಬಲ ಪ್ರತಿಪಕ್ಷವಾಗಿ ಮುಂದಿನ ವಿದ್ಯಮಾನ ನಿಭಾಯಿಸಲು ಬಿಜೆಪಿ ತಯಾರಿದೆ ಎಂದು ಹೇಳುವ ಮೂಲಕ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಲಿದೆ ಎಂಬ ಸುಳಿವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ್ದಾರೆ.
ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ದಿಶಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಮರೆ ಮಾಚಲು ಅಧಿಕಾರ ಹಸ್ತಾಂತರದ ವಿಷಯವನ್ನು ಮುಂದು ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜನ ಐದು ವರ್ಷಕ್ಕೆ ಆರಿಸಿದ್ದಾರೆ. ಆದರೆ ಇವರು ಜನಪರ ಆಡಳಿತ ನೀಡಲು ವಿಫಲರಾಗಿದ್ದಾರೆ. ಈಗಲಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಕಿತ್ತಾಡದೆ, ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಕಾಗೇರಿ ಸಲಹೆ ನೀಡಿದರು.
ಕೇವಲ ಎರಡುವರೆ ವರ್ಷದಲ್ಲೇ ಜನರ ವಿಶ್ವಾಸ ಗಳಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂದ ಕಾಗೇರಿ, ಈ ಸರ್ಕಾರದಿಂದ ಅಭಿವೃದ್ಧಿ ಪರ ಚಟುವಟಿಕೆ ನಡೆಸುವಂತ ಯಾವ ಲಕ್ಷಣವು ಕಾಣುತ್ತಿಲ್ಲ.ಅಧಿಕಾರದ ಕಚ್ಚಾಟದಿಂದ ಆಡಳಿತವೇ ಕುಸಿದು ಹೋಗಿದೆ ಎಂದರು.
ಯೋಜನೆಗಳ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ. ಕಾನೂನು ಸುವ್ಯಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಆರೋಪಿಸಿದರು.
ಅಧಿಕಾರ ಹಂಚಿಕೆ ವಿವಾದದಲ್ಲೇ ಸರ್ಕಾರ ಮುಳುಗಿದ್ದು, ಆಡಳಿತ ವೈಫಲ್ಯತೆ ಮರೆಮಾಚಲೆಂದೆ ಅಧಿಕಾರ ಹಂಚಿಕೆ ವಿವಾದ ಮುನ್ನೆಲೆಗೆ ತರಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ತಂತ್ರಗಾರಿಕೆ ಎಂದು ಕಿಡಿಕಾರಿದರು.
ಮಾಜಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ರಾಜಕೀಯಕ್ಕೆ ಪ್ರವೇಶಿಸುತ್ತಾರಂತಲ್ಲ ಎಂಬ ಪ್ರಶ್ನೆಗೆ ಅವರು ನಮ್ಮ ಜೊತೆ ಇದ್ದಾರೆಂದರು.
ದಿಶಾ ಸಮಿತಿ ಸದಸ್ಯೆ ಜಯಾ ನಾಯ್ಕ ಹಾಗೂ ಇತರರು ಸಂಸದರ ಜೊತೆಗೆ ಇದ್ದರು.
